

ಪುತ್ತೂರು: ಮಹಿಳೆಯರ ಸಮಸ್ಯೆಯನ್ನು ಬಗೆಹರಿಸುವ ಸಾಂತ್ವನ ಕೇಂದ್ರಕ್ಕೆ ಪುತ್ತೂರಿನಲ್ಲಿ ಕಾಯಕಲ್ಪ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶಾಸಕರು ವಿಶೇಷ ಅನುದಾನದಲ್ಲಿ ಕೆಲಸ ಮಾಡಲು ಸೂಚಿಸಿದ್ದರೂ, ಚುನಾವಣೆಯ ನೆಪ ಹೇಳಿಕೊಂಡು ಅಽಕಾರಿಗಳು ಇನ್ನೂ ಕಟ್ಟಡದ ದುರಸ್ತಿಗೆ ಮುಂದಾಗಿಲ್ಲ. ಮಳೆಗಾಲದಲ್ಲಿ ಸಂಪೂರ್ಣ ಕಟ್ಟಡವೇ ಕುಸಿದು ಹೋದರೆ ಮತ್ತೆ ಶಾಶ್ವತವಾಗಿ ಸಾಂತ್ವನ ಕೇಂದ್ರ ಸಣ್ಣ ಕೊಠಡಿಯಲ್ಲೇ ನಡೆಸವಂತಾಗುತ್ತದೆ.
ಪುತ್ತೂರಿನಲ್ಲಿ ಮಹಿಳಾ ಸಾಂತ್ವನ ಕೇಂದ್ರವನ್ನು ೨೦೦೮ರಲ್ಲಿ ಪ್ರಾರಂಭಿಸಿದ್ದು, ಇಲ್ಲಿಯವರೆಗೆ ೨೦೩೪ ದೂರು ಪ್ರಕರಣ ದಾಖಲಿಸಿ ಇತ್ಯರ್ಥ ಪಡಿಸಲಾಗಿದೆ. ಸಮುದಾಯದತ್ತ ಸಾಂತ್ವನ ಅಭಿಯಾನದಲ್ಲಿ ೪೦೦ಕ್ಕೂ ಅಧಿಕ ಮಹಿಳಾ ಸಬಲೀಕರಣ ಮತ್ತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ೧೪೪೪೨ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿಕೊಂಡು ಮಹಿಳೆಯರಿಗೆ ಸಾಂತ್ವನ ನೀಡುವ ಈ ಕೇಂದ್ರದಲ್ಲಿ ೪ ಮಂದಿ ಕೆಲಸ ನಿರ್ವಹಿಸುತ್ತಿದ್ದು, ೨೪ ಗಂಟೆಗಳ ಕಾಲ ತೆರೆದಿರುತ್ತದೆ. ಮಹಿಳೆರ ಸಮಸ್ಯೆಗಳನ್ನು ಹೇಳಿಕೊಳ್ಳುವ ಸಮಯದಲ್ಲಿ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಕೇಂದ್ರದಲ್ಲಿ ಸ್ಥಳದ ಅವಶ್ಯಕತೆ ಇದೆ. ಆದರೆ ಸ್ಥಳೀಯ ಅಽಕಾರಿಗಳು ಈ ಕೇಂದ್ರದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿಲ್ಲ.
ನಗರಸಭೆಯ ಅಭಿವೃದ್ಧಿ ಕೆಲಸದ ನೆಪದಲ್ಲಿ ಸಾಂತ್ವನ ಕೇಂದ್ರವನ್ನು ತಾಲೂಕು ಆಡಳಿತ ಸೌಧದ ಪಕ್ಕದ ಕಟ್ಟಡದಿಂದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದ ಸಣ್ಣ ಕೊಠಡಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಈ ಕೊಠಡಿಯಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲದೆ ಸಾಂತ್ವನ ಕಾರ್ಯವನ್ನು ಕಷ್ಟದಲ್ಲಿ ನಿರ್ವಹಿಸಿಕೊಂಡು ಬರಲಾಗುತ್ತಿದೆ. ಹಿಂದೆ ಇದ್ದ ಕಟ್ಟಡವನ್ನು ಅಭಿವೃದ್ಧಿಪಡಿಸಿ ನೀಡಿದರೆ ಮಹಿಳೆಯರ ಸಮಸ್ಯೆಯನ್ನು ಬಗೆಹರಿಸಲು ಹೆಚ್ಚಿನ ಅನುಕೂಲವಾಗಲಿದೆ.
ಹೋಗಲು ದಾರಿಯೇ ಇಲ್ಲ
ಸಾಂತ್ವನ ಕೇಂದ್ರ ನಿರುಪಯುಕ್ತವಾಗಿರುವ ಕಾರಣದಿಂದ ಎಲ್ಲ ಭಾಗದಿಂದ ಗಿಡಗಂಟಿಗಳು ಬೆಳೆಯಲಾರಂಭಿಸಿದೆ. ಒಂದು ಭಾಗದಲ್ಲಿ ಶಾಸಕರ ಕಚೇರಿ ವಾಹನ ನಿಲುಗಡೆ ಸ್ಥಳವಿದ್ದರೆ ಇನ್ನೆರಡು ಭಾಗದಲ್ಲಿ ತಡೆಗೋಡೆ ಇದೆ. ಇದರಿಂದ ಸಮರ್ಪಕ ಹಾದಿಯೂ ಈ ಕಟ್ಟಡಕ್ಕೆ ಇಲ್ಲದ ಸ್ಥಿತಿ ಸದ್ಯ ನಿರ್ಮಾಣವಾಗಿದೆ. ತ್ವರಿತವಾಗಿ ಗಿಡಗಂಟಿಗಳನ್ನು ತೆರವು ಮಾಡದೆ ಹೋದರೆ ಕಟ್ಟದ ಛಾವಣಿಯೂ ಮಳೆಗೆ ಬಿದ್ದು ಹೋಗುವ ಸಾಧ್ಯತೆ ಇದೆ.
ಅಭಿವೃದ್ಧಿ ನಪದಲ್ಲಿ ಸ್ಥಳಾಂತರ
ನಗರಸಭೆಗೆ ಸೇರಿದ ಪುಡಾ ಕಟ್ಟಡದ ಸಮೀಪದ ಹಳೆಯ ಕಟ್ಟಡದಲ್ಲಿ ಹಿಂದೆ ಸಾಂತ್ವನ ಕೇಂದ್ರ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಈ ಪ್ರದೇಶದಲ್ಲಿ ನಗರಸಭೆಯ ಹೊಸ ಕಟ್ಟಡ ಬರುವ ಹಿನ್ನೆಲೆಯಲ್ಲಿ ಇದನ್ನು ಸ್ಥಳಾಂತರ ಮಾಡಲಾಗಿತ್ತು. ಆದರೆ ಈಗ ಪುಡಾ ಕಟ್ಟಡದಲ್ಲಿ ಶಾಸಕರ ಕಚೇರಿ ಮಾಡಲಾಗಿದ್ದು, ಈ ಕಟ್ಟಡ ಭೂತ ಬಂಗಲೆಯಂತೆ ಭಾಸವಾಗುತ್ತಿದೆ. ಈಗ ಕಟ್ಟಡಕ್ಕೆ ಹೊಸ ರೂಪ ನೀಡಿದರೆ ಮಹಿಳೆಯರ ಸಾಂತ್ವನಕ್ಕೆ ಬೇಕಾದಷ್ಟು ಸ್ಥಳಾವಕಾಶ ಲಭಿಸುತ್ತದೆ.
ಸರ್ಕಾರದ ಸಾಂತ್ವನ ಯೋಜನೆಯಡಿಯಲ್ಲಿ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಜನ ಶಿಕ್ಷಣ ಟ್ರಸ್ಟ್ ವತಿಯಿಂದ ಸಾಂತ್ವನ ಕೇಂದ್ರವನ್ನು ನಡೆಸಿಕೊಂಡು ಬರಲಾಗುತ್ತಿದೆ. ಪುತ್ತೂರು ಕೇಂದ್ರದ ಕಟ್ಟಡದ ಬಗ್ಗೆ ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದು, ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.
| ಕೃಷ್ಣ ಮೂಲ್ಯ
ನಿರ್ದೇಶಕರು, ಜನಶಿಕ್ಷಣ ಟ್ರಸ್ಟ್