

ಪುತ್ತೂರು: ಹೊಟ್ಟೆ ನೋವಿನಿಂದ ಆಸ್ಪತ್ರೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕನ ಸಾವಿಗೆ ಆಸ್ಪತ್ರೆಯ ಬೇಜವಾಬ್ದಾರಿ ಕಾರಣ ಎಂದು ಆರೋಪಿಸಿ ಮಂಗಳವಾರ ಸಾಯಂಕಾಲ ಆಸ್ಪತ್ರೆಯ ಮುಂಭಾಗ ಶವವನ್ನು ಇಟ್ಟು ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪುತ್ತೂರು ನಗರಠಾಣೆಯ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ಅವರು ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತೇವೆ. ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡಿದರು. ಅವರ ಮಾತಿನಿಂದ ತೃಪ್ತರಾಗದ ಪ್ರತಿಭಟನಾಕಾರರು ಅಧಿಕಾರಿಗಳು ಆಗಮಿಸಿ ನಮ್ಮ ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶಿವಶಂಕರ್ ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು. ಮೂರು ದಿನಗಳೊಳಗೆ ನ್ಯಾಯ ಸಿಗದಿದ್ದರೆ ಪುತ್ತೂರು ನಗರಠಾಣೆಯ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ದ.ಕ. ದಲಿತ್ ಸೇವಾಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು, ಅಂಬೇಡ್ಕರ್ ತತ್ವರಕ್ಷಣಾಸಮಿತಿ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ, ದಲಿತ ಮುಖಂಡರಾದ ಅಭಷೇಕ್ ಬೆಳ್ಳಿಪ್ಪಾಡಿ, ಅಣ್ಣಪ್ಪ ಕಾರೆಕ್ಕಾಡು, ಜಿಲ್ಲಾ ಕಾರ್ಯಾಧ್ಯಕ್ಷ ಚಂದ್ರಶೇಖರ್ ಯು ವಿಟ್ಲ, ಜಿಲ್ಲಾ ಸಂಚಾಲಕ ಧನಂಜಯ ಬಲ್ನಾಡು, ಮಾದಿಗ ಸಮಾಜ, ವಿವಿಧ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.