೩೧ಕ್ಕೆ ಪುತ್ತೂರು ಮೊಸರು ಕುಡಿಕೆ - ಶೋಭಾಯಾತ್ರೆ, ಮುದ್ದುಕೃಷ್ಣ, ಶಂಖನಾದ ಸ್ಪರ್ಧೆ

IMG-20240822-WA0017
Published on


ಪುತ್ತೂರು: ವಿಶ್ವ ಹಿಂದು ಪರಿಷತ್ ಮತ್ತು ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ವಿಶ್ವ ಹಿಂದು ಪರಿಷತ್‌ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ೧೪ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ಆ.೩೧ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ ಹೇಳಿದರು.


ಉತ್ಸವದ ಪೂರ್ವಭಾವಿಯಾಗಿ ಆ.೨೪ರಂದು ಬೆಳಗ್ಗೆ ೧೦ರಿಂದ ವಿವಿಧ ತಂಡಗಳ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಅಶ್ವಿನಿ ಹೋಟೆಲ್ ಮಾಲೀಕ ಅಶ್ವಿನ್ ರೈ ಉದ್ಘಾಟಿಸಲಿದ್ದಾರೆ. ೨೫ರಂದು ಜಿಲ್ಲಾಮಟ್ಟದ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಿದ್ದು, ಪ್ರಗತಿ ಆಸ್ಪತ್ರೆಯ ಡಾ. ಸುಧಾ ಎಸ್. ರಾವ್ ಉದ್ಘಾಟಿಸಲಿದ್ದಾರೆ. ಮುದ್ದುಕೃಷ್ಣ, ಕಂದಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ರಾಧಾಕೃಷ್ಣ ವೇಷ ಸ್ಪರ್ಧೆ ಹಾಗೂ ಎರಡು ವಿಭಾಗದಲ್ಲಿ ಶಂಖನಾದ ಸ್ಪರ್ಧೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


೩೧ರಂದು ಮಕ್ಕಳಿಗೆ ವಿವಿಧ ಆಟೋಟಗಳು, ಭಾರತ ಮಾತೆಯ ಚಿತ್ರ ಬಿಡಿಸುವುದು, ಸ್ಮರಣ ಶಕ್ತಿ, ಅಡ್ಡಕಂಬ, ದೇಶಭಕ್ತಿ ಗೀತೆ, ಗುಂಡೆಸೆತ, ಭವದ್ಗೀತೆ ೧೨ನೇ ಅಧ್ಯಾಯದ ಕಂಠಪಾಠ, ಮಡಿಕೆ ಒಡೆಯುವ ಸ್ಪರ್ಧೆ, ಮಹಿಳೆಯರಿಗೆ ಸಂಗೀತ ಕುರ್ಚಿ, ರಂಗವಲ್ಲಿ ಸ್ಪರ್ಧೆ, ಗುಂಡೆಸೆತ, ಹಗ್ಗಜಗ್ಗಾಟ, ಯುವಕರಿಗೆ ಉದ್ದಕಂಬ ಸ್ಪರ್ಧೆ ಆಯೋಜಿಸಲಾಗಿದೆ. ಮಧ್ಯಾಹ್ನ ೨.೩೦ರಿಂದ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಮುಂಭಾಗದಿಂದ ಶೋಭಾಯಾತ್ರೆ ಹಾಗೂ ಅಟ್ಟಿ ಮಡಿಕೆ ಒಡೆಯುವ ಸಾಹಸ ಸ್ಪರ್ಧೆ ನಡೆಯಲಿದೆ. ಸಾಯಂಕಾಲ ೬.೩೦ರಿಂದ ವಿಶ್ವ ಹಿಂದು ಪರಿಷತ್ ಸ್ಥಾಪನಾ ದಿನದ ಷಷ್ಠಿಪೂರ್ತಿ ಸಂಭ್ರಮ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ ಸಹಕಾರ್ಯದರ್ಶಿ ಶಿವಾನಂದ ಮೆಂಡನ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.


ಫಿಸಿಯೋಥೆರಪಿಸ್ಟ್ ಕೃಷ್ಣ ಪ್ರಸನ್ನ, ಮೊಸರು ಕುಡಿಕೆ ಉತ್ಸವ ಸಮಿತಿ ಸಂಚಾಲಕ ಉಮೇಶ್ ನಾಯಕ್, ಉಪಾಧ್ಯಕ್ಷೆ ವಿ. ಪ್ರಭಾವತಿ ಬೊಳುವಾರು, ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ನಗರ ಪ್ರಖಂಡ ಅಧ್ಯಕ್ಷ ದಾಮೋದರ ಪಾಟಾಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net