ಮಗಳ ಮೇಲೆ ಅತ್ಯಾಚಾರ ಯತ್ನ ಸಾಬೀತು: ತಂದೆಗೆ 5 ವರ್ಷ ಕಠಿಣ ಜೈಲು ಶಿಕ್ಷೆ

jail
Published on

ಸುಳ್ಯ: ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ತಂದೆಯ ಮೇಲೆ ಪುತ್ತೂರು ಪೋಕ್ಸೋ ವಿಶೇಷ ನ್ಯಾಯಾಲಯ ಹಾಗೂ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ 5 ವರ್ಷಗಹಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 25,000 ರೂ.ದಂಡ ವಿಧಿಸಿದೆ.

ಅಪರಾಧಿ ಸುಳ್ಯ ತಾಲೂಕಿನ ಎಣ್ಮೂರು ಗ್ರಾಮದ ನಾರಾಯಣ ನಾಯ್ಕ ಎಂಬುವನಾಗಿದ್ದು ಮೇ 24, 2015ರಂದು ಅಪ್ರಾಪ್ತ ವಯಸ್ಸಿನ ತನ್ನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನು. ಮಗಳು ಬೊಬ್ಬೆ ಹಾಕಿದಾಗ ತಾಯಿಗೆ ಎಚ್ಚರವಾಗಿದ್ದು, ಈ ವೇಳೆ ಅಪರಾಧಿ ನಾರಾಯಣ ನಾಯ್ಕ ಹೆಂಡತಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದ. ಈ ಕುರಿತು ಬಾಲಕಿಯ ತಾಯಿ ಸುಬ್ರಹ್ಮಣ್ಯ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.

ಅಂದಿನ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ಬಿ.ಎಸ್.ಸತೀಶ್ ಅರೋಪಿಯ ವಿರುದ್ಧ ತನಿಖೆ ನಡೆಸಿ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಲಯ ಹಾಗೂ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಅವರು ಅತ್ಯಾಚಾರ ಯತ್ನ ಸಾಬೀತಾದ ಹಿನ್ನೆಲೆ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದ್ದಲ್ಲಿ ಒಂದು ವರ್ಷ ಸಾದಾ ಶಿಕ್ಷೆ ವಿಧಿಸಲಾಗಿದೆ.

ಬಾಲಕಿಯ ತಾಯಿಗೆ ಅವಾಚ್ಯವಾಗಿ ಬೈದ ಬಗ್ಗೆ ನಾಲ್ಕು ತಿಂಗಳ ಸಾದಾ ಸ್ವರೂಪದ ಶಿಕ್ಷೆ ಮತ್ತು 1000 ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದ್ದಲ್ಲಿ ಪುನಃ ಒಂದು ತಿಂಗಳ ಸಾದಾ ಸ್ವರೂಪದ ಶಿಕ್ಷೆ ವಿಧಿಸಿದೆ. ಆರೋಪಿಯು ಬಾಲಕಿಯ ತಾಯಿಗೆ ಹಲ್ಲೆ ಮಾಡಿದ ಬಗ್ಗೆ 4 ತಿಂಗಳ ಸಾದಾ ಸ್ವರೂಪದ ಶಿಕ್ಷೆ ಮತ್ತು 500 ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ 15 ದಿವಸಗಳ ಸ್ವರೂಪದ ಶಿಕ್ಷೆ ವಿಧಿಸಲಾಗಿದೆ.

ದಂಡದ ಮೊತ್ತದಲ್ಲಿ 25,000ರೂ. ವನ್ನು ಸಂತ್ರಸ್ತ ಬಾಲಕಿಗೆ ನೀಡಲು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ಬಾಲಕಿಗೆ ಪರಿಹಾರವಾಗಿ 1 ಲಕ್ಷ ರೂ. ನೀಡುವಂತೆ ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದೆ.

ಸರ್ಕಾರದ ಪರವಾಗಿ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net