

ಪುತ್ತೂರು: ಕೃಷಿಯನ್ನು ಉದ್ಯಮದಂತೆ ಉದ್ಯಮವನ್ನು ಕೃಷಿಯಂತೆ ಮಾಡುವಂತಾಗಬೇಕು ಎಂಬುದೇ ಕೃಷಿಕೋದ್ಯಮ ಕಾರ್ಯಕ್ರಮದ ಉದ್ದೇಶ. ಕೃಷಿಯನ್ನು ಉದ್ಯಮವಾಗಿ ಪರಿವರ್ತಿಸುವುದು ಇಂದಿನ ಅಗತ್ಯಗಳಲ್ಲಿ ಒಂದು ಎಂದು ಮುಳಿಯ ಪ್ರತಿಷ್ಠಾನದ ಅಧ್ಯಕ್ಷ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೇಳಿದರು.
ಮುಳಿಯ ಪ್ರತಿಷ್ಠಾನ ಸಹಯೋಗದಲ್ಲಿ ಬುಧವಾರ ಪುತ್ತೂರಿನಲ್ಲಿ ಕೃಷಿಕೋದ್ಯಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೃಷಿಗೂ ಉದ್ಯಮಕ್ಕೂ ಎಲ್ಲಿಯ ನಂಟು ಎಂಬ ಪ್ರಶ್ನೆ ಸಹಜ. ಕೃಷಿ ಹಾಗೂ ಉದ್ಯಮ ಎರಡೂ ಪ್ರತ್ಯೇಕ ವಿಷಯ ಆದರೂ, ಅವರೆಡಕ್ಕೂ ಪರಸ್ಪರ ನಂಟು ಇದೆ. ಕೃಷಿ ಕಾರ್ಯ ಮಾಡುವಾಗ ಪ್ರತಿ ಗಿಡವನ್ನೂ ಕಾಳಜಿಯಿಂದ ಸಾಕಬೇಕು. ಅದರಿಂದ ಎಷ್ಟು ಸಾಧ್ಯವೋ ಅಷ್ಟು ಇಳುವರಿ ಪಡೆದುಕೊಳ್ಳುವತ್ತ ಕೃಷಿಕರು ಗಮನ ಹರಿಸುತ್ತಾರೆ ಎಂದರು.
ಕಾಸರಗೋಡು ಸಿಪಿಸಿಆರ್‌ಐ ಚೀಫ್ ಟೆಕ್ನಿಕಲ್ ಆಫೀಸರ್ ಎಚ್.ಮುರಳೀಕೃಷ್ಣ, ಇಂಟಿಗ್ರೇಟರ್ಸ್ ಫೌಂಡರ್ ಅಶೋಕ್ ಕುಮಾರ್, ಸುದ್ದಿ ಸಮೂಹ ಸಂಸ್ಥೆ ಮುಖ್ಯಸ್ಥ ಯು.ಪಿ ಶಿವಾನಂದ ಮೊದಲಾದವರು ಉಪಸ್ಥಿತರಿದ್ದರು.
ಸಾವಯವ ಕೃಷಿ ಬಗ್ಗೆ ಡಾ.ವೇಣು ಕಳೆಯತ್ತೋಡಿ, ಕೃಷಿ ತಂತ್ರಗಾರಿಕೆ ಬಗ್ಗೆ ಶ್ರೀಹರಿ ಭಟ್ ಸಜಂಗದ್ದೆ, ನರ್ಸರಿ ಬಗ್ಗೆ ವೇಣುಗೋಪಾಲ್, ಇನ್ಟ್ಸಾ ಬಾಸ್ಕೆಟ್ ಕೃಷಿ ಮಳಿಗೆ ಬಗ್ಗೆ ಕೃಷ್ಣಮೋಹನ್, ಆಯುರ್ವೇದ ಮೂಲಿಕೆಗಳ ಕೃಷಿ ಬಗ್ಗೆ ಡಾ.ಹರಿಕೃಷ್ಣ ಪಾಣಾಜೆ, ಸುರಂಗ ನೀರಾವರಿ ಬಗ್ಗೆ ಗೋವಿಂದ ಭಟ್ ಮಾಣಿಲ, ಹೈನುಗಾರಿಕೆ ಬಗ್ಗೆ ಕಸ್ತೂರಿ ಅಡ್ಯಂತಾಯ, ಬಸಳೆ ಕೃಷಿ ಬಗ್ಗೆ ಸುರೇಶ್ ಗೌಡ, ತರಕಾರಿ ಕೃಷಿ ಬಗ್ಗೆ ಶ್ರೀರಾಮ ಭಟ್ಟ ಚೆನ್ನಾಂಗೋಡು, ಕೃಷಿ ಸಂಘಟನೆ ಬಗ್ಗೆ ಮಹೇಶ್ ಪುಚ್ಚಪ್ಪಾಡಿ ಅಭಿಪ್ರಾಯ ಮಂಡಿಸಿದರು. ವೇಣು ಶರ್ಮ ಕಾರ್ಯಕ್ರಮ ನಿರೂಪಿಸಿದರು.