

ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈಬುಧವಾರ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಮತ್ತು ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದರು.
ಸುಮಾರು ಅರ್ಧ ಗಂಟೆ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕರು ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಡಿಕೆಯನ್ನು ನೆನಪಿಸಿ, ಬಜೆಟ್ನಲ್ಲಿ ಈ ಬಾರಿ ಕ್ಷೇತ್ರದ ಜನರ ಬಹುಕಾಲದ ಬೇಡಿಕೆಯಾದ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಕಳೆದ ಬಜೆಟ್ನಲ್ಲಿ ಮಂಜೂರಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಗ್ಯಾರಂಟಿ ಯೋಜನೆಗೆ ಬಜೆಟ್ನಲ್ಲಿ ಹೆಚ್ಚು ಅನುದಾನ ಇರಿಸಿದ ಕಾರಣ ನಾನು ಹೆಚ್ಚು ಒತ್ತಡ ಹಾಕಿರಲಿಲ್ಲ. ಮೆಡಿಕಲ್ ಕಾಲೇಜು ಆಗಬೇಕು ಎಂಬುದು ನನ್ನ ಮತ್ತು ಕ್ಷೇತ್ರದ ಜನರ ಕನಸಾಗಿದೆ ಅದನ್ನು ನನಸು ಮಾಡಿಕೊಡಬೇಕು ಎಂದು ಸಿಎಂ ಅವರಲ್ಲಿ ಶಾಸಕರು ವಿನಂತಿಸಿದರು. ಕಾಲೇಜು ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ ಎಂದೂ ತಿಳಿಸಿದರು.
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ರಸ್ತೆ, ಸರ್ಕಾರಿ ಕಟ್ಟಡಗಳು, ಶಾಲಾ, ಕಾಲೇಜು ಕಟ್ಟಡಗಳು, ತಡೆಗೋಡೆ, ಬೃಹತ್ ಅಣೆಕಟ್ಟುಗಳು ಸೇರಿದಂತೆ ಕ್ಷೇತ್ರದ ಜನರಿಂದ ದಿನದಿಂದ ದಿನಕ್ಕೆ ಕಾಮಗಾರಿಯ ಬೇಡಿಕೆಗಳು ಬರುತ್ತಿದ್ದು ಈಗ ಬರುತ್ತಿರುವ ಅನುದಾನವನ್ನು ಹೆಚ್ಚು ಪ್ರಮಾಣದಲ್ಲಿ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅನೇಕ ವರ್ಷಗಳಿಂದ ಇರುವ ಕೆಲವೊಂದು ಕಾಮಗಾರಿ ಬೇಡಿಕೆಗಳಿಗೆ ಅನುದಾನವನ್ನು ನೀಡಬೇಕಿದೆ. ಈ ಕಾರಣಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಮನವಿ ಸಲ್ಲಿಸಿದರು.