ಪುತ್ತೂರು: ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ೪೫ ದಿನದೊಳಗೆ ಪೂರ್ಣಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಆರ್ಥಿಕ ಇಲಾಖೆ ಕಾರ್ಯದರ್ಶಿಗಳ ಜತೆ ಮಾತುಕತೆ ನಡೆಸಿ ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳಲು ಸಹಕಾರ ನೀಡುವಂತೆ ವಿನಂತಿಸಿದರು.
ಬುಧವಾರ ಬೆಂಗಳೂರಿನಲ್ಲಿ ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಪಿ.ಸಿ.ಜಾಫರ್(ಬಜೆಟ್), ಕಾರ್ಯದರ್ಶಿ ಡಾ.ರಿತೇಶ್ ಸಿಂಗ್, ಡಾ.ವಿಶಾಲ್ ಅವರನ್ನು ಭೇಟಿಯಾದ ಶಾಸಕರು ಪುತ್ತೂರಿನ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ಪ್ರಕ್ರಿಯೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಮೆಡಿಕಲ್ ಕಾಲೇಜು ಕಾಮಗಾರಿ ಪ್ರಾರಂಭ ವಿಚಾರದಲ್ಲಿ ಯಾವುದೇ ವಿಳಂಬವಾಗಬಾರದು. ಈಗಾಗಲೇ ಜಾಗದ ಸರ್ವೇ ನಡೆಸಲಾಗಿದೆ ಎಂದು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು. ೪೫ ದಿನದೊಳಗೆ ೨೫೦ ಬೆಡ್ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸಂಬಂಽಸಿದ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿಗೆ ವೇಗ ನೀಡುವಂತೆ ಅಧಿಕಾರಿಗಳಲ್ಲಿ ವಿನಂತಿಸಿದರು.