ಪುತ್ತೂರಿನಲ್ಲಿ ಮೆಡಿಕಲ್ ಹಬ್ - ಶಾಸಕ ಅಶೋಕ್ ರೈ ಭರವಸೆ - ವೈದ್ಯಕೀಯ ಕಾಲೇಜು ಸ್ಥಳ ಪರಿಶೀಲನೆ

PTR_23 MAR_1
Published on

ಪುತ್ತೂರು: ವೈದ್ಯಕೀಯ ಕಾಲೇಜಿಗೆ ಗುರುತಿಸಲಾದ ಜಾಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಕಾರ್ಯಸಾಧ್ಯತಾ ವರದಿ ನೀಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಅಽಕಾರಿಗಳು, ಪುತ್ತೂರು ಶಾಸಕರು ಆಗಮಿಸಿ ಪರಿಶೀಲನೆ ನಡೆಸಿದರು. ಈ ಮೂಲಕ ವೈದ್ಯಕೀಯ ಕಾಲೇಜು ಸ್ಥಾಪನೆಯ ಕೆಲಸ ಕಾರ್ಯಕ್ಕೆ ಚಾಲನೆ ನೀಡಿದಂತಾಗಿದೆ.

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಮೆಡಿಕಲ್ ಕಾಲೇಜು ಪುತ್ತೂರಿನಲ್ಲಿ ಆಗಬೇಕೆಂಬ ವಿನಂತಿಗೆ ಬಜೆಟ್‌ನಲ್ಲಿ ಉತ್ತರ ಸಿಕ್ಕಿದೆ. ಸರ್ಕಾರದ ಸೂಚನೆಯ ಮೇರೆಗೆ ಅಽಕಾರಗಳು ಸ್ಥಳ ಪರಿಶೀಲನೆಗೆ ಆಗಮಿಸಿದ್ದು, ಮುಂದಿನ ವಾರ ಆರ್ಕಿಟೆಕ್ಟ್‌ಗಳು ಬರಲಿದ್ದಾರೆ. ೪೦ ಎಕರೆ ಜಾಗದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಬಳಿಕ ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ಕಾರ್ಯವಾಗಲಿದೆ. ಆಯುರ್ವೇದ ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು ಮಾಡುವ ಮೂಲಕ ಮೆಡಿಕಲ್ ಹಬ್ ಮಾಡುವ ಗುರಿಯನ್ನು ಇಟ್ಟು ಕೊಳ್ಳಲಾಗಿದೆ. ಕೆಲವೇ ಸಮಯದಲ್ಲಿ ಮುಖ್ಯಮಂತ್ರಿಗಳನ್ನು ಕರೆದು ಶಿಲಾನ್ಯಾಸ ನಡೆಸಲಾಗುವುದು ಎಂದರು.

ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಸೇಡಿಯಾಪಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕಾಗಿ ಕಾಯ್ದಿಸಿದ ಜಾಗದಲ್ಲೇ ಆಸ್ಪತ್ರೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಪ್ರಸ್ತಾಪವಾಗಿರುವುದು ಸ್ವಾಗತಾರ್ಹವಾಗಿದೆ. ಕೆದಿಲ ಬೇಟಿಗೆಯಿಂದ ಪಡ್ನೂರು ಭಾಗದಿಂದ ಕಾಲೇಜು ನಿರ್ಮಾಣಕ್ಕೆ ಮೀಸಲಿಟ್ಟ ಜಾಗಕ್ಕೆ ಸಂಪರ್ಕ ಸಾಧ್ಯವಿದೆ. ಮೀಸಲಿಟ್ಟ ಜಾಗ ಎಲ್ಲ ಕಡೆಯಿಂದ ರಸ್ತೆ ಸಂಪರ್ಕಕ್ಕೆ ಅನುಕೂಲವಾಗುವ ಸ್ಥಳವಾಗಿದ್ದು, ಎಲ್ಲ ತಾಲೂಕುಗಳಿಗೆ ಇದು ಕೇಂದ್ರವಾಗಿದೆ. ಆಸ್ಪತ್ರೆ ಪೇಟೆಯಿಂದ ಹೊರವಲಯದಲ್ಲಿ ಇದ್ದಾಗ ನಗರ ಬೆಳೆಯಲು ಸಹಕಾರಿಯಾಗಿದೆ. ಜನರ ಸೇವೆಗೆ ಸುಸಜ್ಜಿತ ಆಸ್ಪತ್ರೆ ತ್ವರಿತವಾಗಿ ಬರಲಿ ಎಂದರು.

ಸ್ಥಳೀಯ ನಿವಾಸಿ ವಿಶ್ವಪ್ರಸಾದ್ ಸೇಡಿಯಾಪು ಮಾತನಾಡಿ, ನಿವೇಶನದಲ್ಲಿ ನೇರಳೆ ಮರ ಹಾಗೂ ಮಾವಿನ ಮರಗಳಿದ್ದು, ಅವುಗಳನ್ನು ಉಳಿಸುವ ಕಾರ್ಯವಾಗಬೇಕು. ನೀರಿನ ಸೆಲೆಗಳಿರುವಲ್ಲಿ ಭೂಮಿ ಅಗೆಯುವುದನ್ನು ಕಡಿಮೆ ಮಾಡಬೇಕು. ಹೆದ್ದಾರಿಯ ಪೆರ್ನೆ ಕಡಂಬು ಭಾಗದಿಂದ ಬರುವ ರಸ್ತೆ ಅಭಿವೃದ್ಧಿಯಾಗಬೇಕಾಗಿದೆ. ಬನ್ನೂರು ಆರ್‌ಟಿಒದಿಂದ ೩ ಕಿ.ಮೀ ಮೂಲಕ ನಿವೇಶನ ತಲುಪಲು ಸಾಧ್ಯವಿದ್ದು, ಅಗಲೀಕರಣ ಮಾಡಬೇಕಾಗಿದೆ. ಕೋಡಿಯಾಡಿ ಹಾಗೂ ಸೇಡಿಯಾಪು ಕಜೆ ಮೂಲಕವೂ ರಸ್ತೆ ಮಾಡುವ ಮೂಲಕ ಸಂಪರ್ಕ ಮಾಡಬಹುದು ಎಂದು ತಿಳಿಸಿದರು.

ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಸುವರ್ಣ, ಈಶ್ವರ ಬೆಡೇಕರ್, ಪದ್ಮನಾಭ ಪೂಜಾರಿ ಸಣ್ಣಗುತ್ತು, ಕೆ.ಪಿ.ಆಳ್ವ, ಎಂ.ಎಸ್.ಮಹಮ್ಮದ್, ಹೋರಾಟ ಸಮಿತಿಯ ಝೇವಿಯರ್ ಡಿಸೋಜ, ಸ್ಥಳೀಯ ನಿವಾಸಿ ಸೇಡಿಯಾಪು ಜನಾರ್ದನ ಭಟ್, ಪುತ್ತೂರು ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಮನೋಜ್, ಆರೋಗ್ಯ ಇಲಾಖೆಯ ಇಂಜನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಗುರುಪ್ರಸಾದ್, ಸಹಾಯಕ ಇಂಜನಿಯರ್ ಸುಧಾಕರ, ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಽಕಾರಿ ಡಾ.ಆಶಾ ಪುತ್ತೂರಾಯ, ತಾಲೂಕು ಆರೋಗ್ಯಾಽಕಾರಿ ಡಾ.ದೀಪಕ್ ಮತ್ತಿತರರು ಉಪಸ್ಥಿತರಿದ್ದರು.

ಬಜೆಟ್ ಮುಗಿಯುತ್ತಿದ್ದಂತೆ ಜಾಗದ ಮಾಹಿತಿಯನ್ನು ನೀಡುವಂತೆ ಮುಖ್ಯಮಂತ್ರಿಯವರು ಸೂಚಿಸಿದ್ದರು. ಇರುವ ಆಸ್ಪತ್ರೆಯಲ್ಲಿ ಕಟ್ಟಡಗಳು ಹಳೆಯದಾಗಿದ್ದು, ಇಲ್ಲಿ ಸ್ಥಳಾವಕಾಶದ ಕೊರತೆಯೂ ಇದೆ. ಐ.ಪಿ.ಎಚ್.ಎಸ್. ಹಾಗೂ ಎನ್.ಎಂ.ಸಿ. ನಿಯಮಗಳ ಪ್ರಕಾರ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಕನಿಷ್ಠ ೧೦ ಎಕರೆ ಜಾಗ ಬೇಕಾಗಿದೆ. ಮೆಡಿಕಲ್ ಕಾಲೇಜಿಗೆ ೩೦೦ ಹಾಸಿಗೆಯ ಆಸ್ಪತ್ರೆ ಹಾಗೂ ೨೫೦ ವಿದ್ಯಾರ್ಥಿಗಳ ಸಾಮರ್ಥ್ಯ ಇರಬೇಕು. ಪ್ರಥಮ ಹಂತದ ಆಸ್ಪತ್ರೆ ನಿರ್ಮಾಣಕ್ಕೆ ೩೦ ಸಾವಿರ ಚದರ ಮೀಟರ್ ಸ್ಥಳಾವಕಾಶ ಬೇಕಾಗಿದೆ. ಈ ಎಲ್ಲ ಕಾರಣದಿಂದ ಹೊಸ ಜಾಗದಲ್ಲೇ ಅಗತ್ಯ ಪ್ರಸ್ತಾವನೆ ನೀಡಲಾಗುವುದು. ಪರಿಸರ ಉಳಿಸುವ ನಿಟ್ಟಿನಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

| ಗುರುಪ್ರಸಾದ್, ಎಇಇ, ಆರೋಗ್ಯ ಇಲಾಖೆ ಇಂಜನಿಯರಿಂಗ್ ಉಪವಿಭಾಗ

ಸುಳ್ಯ, ಕಡಬ, ಬಂಟ್ವಾಳ, ಬೆಳ್ತಂಗಡಿ ಸೇರಿ ಗಡಿಭಾಗದಿಂದ ರೋಗಿಗಳು ಆಗಮಿಸುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಯನ್ನು ಹೊರತು ಪಡಿಸಿದರೆ ಪುತ್ತೂರು ಅಸ್ಪತ್ರೆಗೆ ಹೊರ ಹಾಗೂ ಒಳರೋಗಿಗಳ ಒತ್ತಡ ಹೆಚ್ಚಿದೆ. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಪುತ್ತೂರಿನ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಅಗತ್ಯ ಇದೆ. ತಾಲೂಕು ಆಸ್ಪತ್ರೆಯಲ್ಲಿ ಸದ್ಯ ತಜ್ಞರು ಒಬ್ಬೊಬ್ಬರೇ ಇದ್ದು, ಅನಿವಾರ್ಯ ರಜೆಯ ಸಂದರ್ಭದಲ್ಲಿ ರೋಗಿಗಳನ್ನು ಮಂಗಳೂರಿಗೆ ವರ್ಗಾವಣೆ ಮಾಡಲಾಗುತ್ತದೆ. ಆಸ್ಪತ್ರೆ ಉನ್ನತೀಕರಣದಿಂದ ತಜ್ಞ ವೈದ್ಯರ ಸಂಖ್ಯೆಯಲ್ಲೂ ಏರಿಕೆಯಾಗಿ ಜನರ ಸಮಸ್ಯೆ ನಿರ್ವಾರಣೆಯಾಗಲಿದೆ.

| ಆಶಾ ಪುತ್ತೂರಾಯ, ವೈದ್ಯಾಽಕಾರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net