ನದಿಪಾಲಾಗುವ ಭೀತಿಯಲ್ಲಿ ಪುತ್ತೂರು-ಮಂಜೇಶ್ವರ ಹೆದ್ದಾರಿ

sub
Published on

ರತ್ನಾಕರ ಸುಬ್ರಹ್ಮಣ್ಯ
ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಕಳೆದ ತಿಂಗಳು ಸುರಿದ ಭಾರಿ ಮಳೆಗೆ ಕುಮಾರಧಾರಾ ನದಿ ತುಂಬಿ ಹರಿದಿತ್ತು. ಈ ಸಂದರ್ಭ ಕುಕ್ಕೆ ಸುಬ್ರಹ್ಮಣ್ಯದಿಂದ ಪುತ್ತೂರು-ಮಂಜೇಶ್ವರ ಸಂಪರ್ಕಿಸುವ ಅಂತಾರಾಜ್ಯ ಹೆದ್ದಾರಿ ಕುಮಾರಧಾರಾದ ತಿರುಗಣೆಗುಂಡಿ ಎಂಬಲ್ಲಿ ಮಣ್ಣು ಸಡಿಲಗೊಂಡು ರಸ್ತೆಯ ಒಂದು ಬದಿ ನೀರುಪಾಲಾಗಿದೆ.

ಮಳೆಗಾಲದಲ್ಲಿ ಇಂಗಿದ ನೀರು ರಸ್ತೆ ಅಡಿಯಿಂದ ಹರಿದು ಬರುತ್ತಿತ್ತು. ಮುಂದೆ ನದಿಯಲ್ಲಿ ಪ್ರವಾಹ ಬಂದರೆ ಯಾವುದೇ ಕ್ಷಣದಲ್ಲಿ ರಸ್ತೆ ಕುಸಿದು ನದಿಪಾಲಾಗುವ ಸಾಧ್ಯತೆ ಇದೆ. ಈಗ ಮಳೆ ಕಡಿಮೆಯಾಗಿರುವುದರಿಂದ ಇದನ್ನು ಶೀಘ್ರ ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಡೆಗೋಡೆ ಅಗತ್ಯ: ಜೂನ್-ಜುಲೈ ತಿಂಗಳಲ್ಲಿ ಸುರಿದ ಮಳೆ ನೀರು ಭೂಮಿಯಲ್ಲಿ ಇಂಗುತ್ತದೆ. ಆಗಸ್ಟ್ ತಿಂಗಳಲ್ಲಿ ಬಂದ ನೀರು ಮಣ್ಣನ್ನು ಕೊಚ್ಚಿಕೊಂಡು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಂಬಂಧಪಟ್ಟವರು ಶೀಘ್ರ ಇತ್ತ ಗಮನ ಹರಿಸಬೇಕು. ಅಲ್ಲದೆ ಮಣ್ಣು ಕುಸಿಕ್ಕೊಳಗಾಗುತ್ತಿರುವ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.


ಶಾಶ್ವತ ಪರಿಹಾರಕ್ಕೆ ಆದೇಶ: ಈಗಾಗಲೇ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಶೀಘ್ರವೇ ಇಲ್ಲಿ ಶಾಶ್ವತ ಪರಿಹಾರ ಕ್ರಮ ಜರುಗಿಸಲು ಆದೇಶ ನೀಡಿದ್ದಾರೆ. ಸುಬ್ರಹ್ಮಣ್ಯದ ಕುಮಾರಧಾರಾ ನದಿ ಪ್ರವಾಹದಿಂದ ಮಣ್ಣು ಕುಸಿತಗೊಳ್ಳದಂತೆ ಶಾಶ್ವತವಾಗಿ ತಡೆಗೋಡೆ ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಆದೇಶ ನೀಡಿದ್ದಾರೆ.

ಸೇತುವೆ, ರಸ್ತೆಗೆ ಕಾಯಕಲ್ಪ ಅಗತ್ಯ: ಸುಬ್ರಹ್ಮಣ್ಯ-ಮಂಜೇಶ್ವರ ಸಂಪರ್ಕಿಸುವ ರಾಜ್ಯ ರಸ್ತೆಯಲ್ಲಿ ಕುಮಾರಧಾರಾ ಬಳಿ ದರ್ಪಣ ತೀರ್ಥ ನದಿಗೆ ಸೇತುವೆ ಇದೆ. ತಗ್ಗಿನಲ್ಲಿರುವ ಈ ಸೇತುವೆ ವರ್ಷಂಪ್ರತಿ ಹಲವಾರು ಬಾರಿ ಮುಳುಗಡೆಯಾಗಿ ಸಮಸ್ಯೆ ತಂದೊಡ್ಡುತ್ತಿದೆ. ಇದರಿಂದ ಪುತ್ತೂರು, ಬಳ್ಪ, ಪಂಜ ಈ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಸೇತುವೆಯನ್ನು ಮೇಲ್ದರ್ಜೆಗೆ ಏರಿಸಬೇಕು. ಅಲ್ಲದೆ ರಸ್ತೆಯನ್ನೂ ಏರಿಸಬೇಕು. ಇಲ್ಲವಾದರೆ ಪ್ಲೈಓವರ್ ನಿರ್ಮಿಸಿ ರಸ್ತೆ ಸಂಚಾರ ಮಳೆಗಾಲದಲ್ಲೂ ಸುಗಮವಾಗುವಂತೆ ಮಾಡಬೇಕೆನ್ನುವುದು ಸಾರ್ವಜನಿಕರ ಆಗ್ರಹ.

ಮಣ್ಣು ಕುಸಿಗೊಂಡ ರಸ್ತೆ ದುರಸ್ತಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಸೇತುವೆ ಮೇಲ್ದರ್ಜೆಗೆ ಏರಿಸಬೇಕು. ಪ್ರವಾಹದಿಂದ ಮುಳುಗುವ ರಸ್ತೆಯನ್ನು ಎತ್ತರಿಸಬೇಕು. ಪಿಲ್ಲರ್ ನಿರ್ಮಿಸಿ ಪ್ಲೈಓವರ್ ರೀತಿ ಮಾಡಿದರೆ ಉತ್ತಮ. ಭೂಕುಸಿತಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು. ಲೋಕೋಪಯೋಗಿ ಇಲಾಖೆ ಕಾಮಗಾರಿ ಶೀಘ್ರ ನಡೆಸಬೇಕು. ಈ ಕಾಮಗಾರಿಯನ್ನು ಕುಕ್ಕೆ ದೇವಳದ ಮಾಸ್ಟರ್ ಪ್ಲಾನ್‌ನಲ್ಲಿ ಸೇರಿಸಿ ಸ್ನಾನಘಟ್ಟ ಅಭಿವೃದ್ಧಿಗೊಳಿಸುವಾಗ ನಡೆಸುವುದು ಉತ್ತಮ.- ಹರೀಶ್ ಇಂಜಾಡಿ, ಗ್ರಾಪಂ ಸದಸ್ಯ, ಸುಬ್ರಹ್ಮಣ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net