ಗೃಹರಕ್ಷಕ ದಳಕ್ಕಿಲ್ಲ ಸ್ವಂತ ಕಟ್ಟಡ

gruharakshaka new
Published on

ಪುತ್ತೂರು: ಸುಮಾರು 30 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಆರಂಭಗೊಂಡ ಗೃಹರಕ್ಷಕ ದಳಕ್ಕೆ ಸ್ವಂತ ನಿವೇಶನ, ಕಟ್ಟಡವಿಲ್ಲದೆ ತಮ್ಮ ಸೇವಾ ಚಟುವಟಿಕೆಯ ಸಭೆ ನಡೆಸಲು ಹಿನ್ನಡೆಯಾಗಿದೆ. ಅನಿವಾರ್ಯ ಸಂದರ್ಭ ಪುತ್ತೂರು ದೇವಸ್ಥಾನ, ಮಂದಿರ, ಹಾಲ್‌ಗಳನ್ನು ಅವಲಂಬಿಸುತ್ತಿದ್ದ ಗೃಹರಕ್ಷಕ ದಳ ಪ್ರಮುಖರು ಸ್ವಂತ ಕಟ್ಟಡಕ್ಕಾಗಿ ಪುತ್ತೂರು ಶಾಸಕರ ಮೊರೆ ಹೋಗಿದ್ದಾರೆ.

ಗೃಹರಕ್ಷಕ ದಳ ಸರ್ಕಾರದ ಅಧೀನದಲ್ಲಿರುವ ಸ್ವತಂತ್ರ ಹಾಗೂ ತುರ್ತು ಅಗತ್ಯದ ಸಂದರ್ಭ ಸೇವೆ ಸಲ್ಲಿಸುವ ಸಂಸ್ಥೆ. ಪೊಲೀಸರೊಂದಿಗೆ ಪೊಲೀಸರಾಗಿ, ಅಗ್ನಿಶಾಮಕದಳ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲೂ ಉತ್ತಮ ಸೇವಾ ಕಾರ್ಯ ನಿರ್ವಹಿಸುತ್ತಿದೆ. ಪುತ್ತೂರಿನಲ್ಲಿ ಈಗಿನ ಮಿನಿ ವಿಧಾನಸೌಧವಿದ್ದ ಸ್ಥಳದಲ್ಲಿ ಆಗಿನ ಸಹಾಯಕ ಕಮೀಷನರ್ ಕಚೇರಿ ಕಟ್ಟಡದ ಒಂದು ಭಾಗದಲ್ಲಿ ಗೃಹರಕ್ಷಕ ದಳಕ್ಕೂ ಕೊಠಡಿ ಇತ್ತು. ಆದರೆ ಮಿನಿ ವಿಧಾನಸೌಧ ನಿರ್ಮಾಣ ಆದ ಬಳಿಕ ಅಲ್ಲಿಂದ ಬೇರೆ ಬೇರೆ ಕಡೆ ಬಾಡಿಗೆ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದ ಗೃಹರಕ್ಷಕ ದಳದ ಕಚೇರಿ ಕೊನೆಗೆ ಹಿಂದಿನ ಹಳೇ ಪುರಸಭೆ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಈಗ ಪುರಸಭೆ ಕಟ್ಟಡವಿದ್ದ ಸ್ಥಳದಲ್ಲಿ ನೂತನ ನಗರಸಭೆ ಆಡಳಿತ ಕಚೇರಿ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಹಳೇ ಕಟ್ಟಡವನ್ನು ಕೆಡವಲಾಗಿದ್ದರಿಂದ ಗೃಹರಕ್ಷಕ ದಳದ ಕಚೇರಿ ಬೀದಿಗೆ ಬಂದಿದೆ.

ಪುತ್ತೂರು ಶಾಸಕರಿಗೆ ಮನವಿ

ಗೃಹರಕ್ಷಕ ದಳಕ್ಕೆ ಪುತ್ತೂರಿನಲ್ಲಿ ಸ್ವಂತ ನಿವೇಶನ ಕೂಡಿಸುವಂತೆ ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಮುರಳೀಮೋಹನ್ ಚೂಂತಾರ್, ಶಾಸಕ ಸಂಜೀವ ಮಠಂದೂರು ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಗೃಹರಕ್ಷಕ ದಳದ 15 ಘಟಕಗಳಿದ್ದು, ಒಂದು ಸಾವಿರ ಗೃಹರಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುತ್ತೂರಿನಲ್ಲಿ ಸುಮಾರು 60 ಗೃಹರಕ್ಷಕ ದಳದ ಸಿಬ್ಬಂದಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ.

ಗೃಹರಕ್ಷಕ ದಳದವರ ಬೇಡಿಕೆಯಂತೆ ಅವರ ಕಚೇರಿ ಕಟ್ಟಡಕ್ಕಾಗಿ ನಿವೇಶನ ಕಾದಿರಿಸಲಾಗುವುದು. ಪುತ್ತೂರಿನ ಕೇಂದ್ರ ಭಾಗದಲ್ಲೇ ನಿವೇಶನ ಕಾದಿರಿಸುವ ನಿಟ್ಟಿನಲ್ಲಿ ತಹಸೀಲ್ದಾರ್, ಕಂದಾಯ ಅಧಿಕಾರಿಗಳ ಜತೆ ಜಾಗ ಪರಿಶೀಲನೆ ನಡೆಸುತ್ತೇವೆ. ಬಳಿಕ ಅವರು ಜಿಲ್ಲಾಮಟ್ಟದಲ್ಲಿ ಬೇಕಾದ ಪತ್ರಗಳನ್ನು ನೀಡಬೇಕು. ಕಟ್ಟಡ ನಿರ್ಮಾಣಕ್ಕೆ ಇಲಾಖೆ ಮೂಲಕ ಅನುದಾನ ಹೊಂದಾಣಿಕೆ ಮಾಡುವ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಸಂಜೀವ ಮಠಂದೂರು, ಶಾಸಕ

ಗೃಹರಕ್ಷಕ ದಳಕ್ಕೆ ಸ್ವಂತ ಕಟ್ಟಡ, ನಿವೇಶನ ನೀಡುವ ಬಗ್ಗೆ ಶಾಸಕ ಸಂಜೀವ ಮಠಂದೂರು ಸ್ಪಂದಿಸಿದ್ದಾರೆ. ಈ ಬಗ್ಗೆ ಪುತ್ತೂರು ತಹಸೀಲ್ದಾರ್, ಕಂದಾಯ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. 30 ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಗೃಹರಕ್ಷಕ ದಳಕ್ಕೆ ಸ್ವಂತ ಕಟ್ಟಡ, ನಿವೇಶನ ಸಿಗುವ ಭರವಸೆ ಇದೆ.

ಮುರಲೀಮೋಹನ್, ಗೃಹರಕ್ಷಕ ದಳದ ಜಿಲ್ಲಾ ಕಮಾಂಡರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net