ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ಉಮಾನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಉಪಾಧ್ಯಕ್ಷ ಜೋಕಿಂ ಡಿಸೋಜ, ತಾಪಂ ಇಒ ನವೀನ್ ಭಂಡಾರಿ, ಮೆಸ್ಕಾಂ ಎಇಇ ಶಿವಶಂಕರ ಇದ್ದರು.
ಪುತ್ತೂರು: ಸರ್ಕಾರ ಯುವನಿಧಿಯನ್ನು ಎರಡು ವರ್ಷಗಳ ಕಾಲ ನೀಡುತ್ತಿದ್ದು, ಬಳಿಕ ಅವರಿಗೆ ಕೆಲಸ ಸಿಗಬೇಕೇಂಬ ಕಾರಣದಿಂದ ಉದ್ಯೋಗ ಮೇಳದಲ್ಲಿ ಮೊದಲ ಆದ್ಯತೆಯನ್ನು ನೀಡಬೇಕು. 80 ಸಾವಿರ ಕುಟುಂಬಕ್ಕೆ ಗೃಹಜ್ಯೋತಿ ಸವಲತ್ತು ಸಿಗುತ್ತಿದ್ದು, ಆ.31ಕ್ಕೆ ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕವಾಗಿದೆ. ಮೆಸ್ಕಾಂ ಸಿಬ್ಬಂದಿ ಅರ್ಜಿಗಳನ್ನು ಮನೆ ಮನೆಗೆ ಹೋಗಿ ಹಂಚಬೇಕು. ಗುಂಪಾಗಿ ಮಾಡುವುದಕ್ಕೆ ಸದ್ಯ ಅವಕಾಶವಿಲ್ಲ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಹೇಳಿದರು.
ಪುತ್ತೂರು ತಾಲೂಕು ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಅಗತ್ಯ. ಪಡಿತರ ಕೇಂದ್ರಗಳ ತಪ್ಪುಗಳಿಗೆ ನೋಟಿಸ್ ನೀಡಬೇಕು. ವಿಟ್ಲದಿಂದ ಉಪ್ಪಿನಂಗಡಿಗೆ ನೇರ ಬಸ್ ಸಂಪಕದ ಬೇಡಿಕೆಯಿದ್ದು, ಅದ್ಯತೆಯಲ್ಲಿ ಪರಿಗಣಿಸಬೇಕು ಎಂದರು.
ಜಿಲ್ಲಾ ಉದ್ಯೋಗ ವಿನಿಮಯ ಹಂಚಿಕೆ ಕೇಂದ್ರದ ಮಂಜೂಷಾ ಮಾತನಾಡಿ, ಯುವಕರಿಗೆ ಉದ್ಯೋಗ ಮೇಳ ಆಯೋಜಿಸುವ ಕುರಿತು ಚರ್ಚೆ ನಡೆದಿದೆ. ಮುಂದಿನ ತಿಂಗಳು ಎರಡು ದಿನಗಳ ಕಾಲ ಉದ್ಯೋಗ ಮೇಳ ನಡೆಯಲಿದೆ ಎಂದರು.
ಶಾಲಾ ಬಾಲಕರಿಗೂ ಉಚಿತ ಸೌಲಭ್ಯ: ಪುತ್ತೂರು ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಮಾತನಾಡಿ ಸರ್ಕಾರ ಶಾಲೆ--ಕಾಲೇಜುಗಳು ಹೋಗುವ ಹೆಣ್ಣುಮಕ್ಕಳ ಜತೆಗೆ ಗಂಡು ಮಕ್ಕಳಿಗೂ ಉಚಿತ ಸೌಲಭ್ಯ ಕಲ್ಪಿಸಿದೆ. ಜೂನ್ 12ರ ಮೊದಲು ಪಾಸ್ ಮಾಡಿಸಿದ್ದವರಿಗೆ ಸೇವಾ ಸಿಂಧು ಮೂಲಕ ಹಣ ಹಿಂತಿರುಗಿಸಲಾಗುತ್ತಿದೆ. ಹಲವು ಮಂದಿಗೆ ಈಗಾಗಲೇ ಮರುಪಾವತಿ ಆಗಿದೆ ಎಂದರು.
ಮೆಸ್ಕಾಂ ಎಇಇ ಶಿವಶಂಕರ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಜೋಕಿಂ ಡಿಸೋಜ, ತಾಪಂ ಇಒ ನವೀನ್ ಭಂಡಾರಿ, ಆಹಾರ ಇಲಾಖೆಯ ಆಹಾರ ನಿರೀಕ್ಷಕಿ ಸರಸ್ವತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ವನಿತಾ ಇದ್ದರು.
ಬಸ್‌ನಲ್ಲಿ ವೈಫೈ ಸೌಲಭ್ಯ ಕಲ್ಪಿಸಿ
ಚಿಲ್ಲರೆ ಸಮಸ್ಯೆಯಿಂದ ನಿರ್ವಾಹಕರಿಗೆ ಮತ್ತು ಗ್ರಾಹಕರಿಗೆ ಆಗುವ ಸಮಸ್ಯೆ ನೀಗಿಸಬೇಕು. ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಡಿಜಿಟಲ್ ಪಾವತಿಗೂ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಬಸ್‌ಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆ ಕೇಳಿಬಂತು.
"
ಪುತ್ತೂರು ವಿಧಾನ ಕ್ಷೇತ್ರಕ್ಕೆ ಗ್ಯಾರಂಟಿ ಯೋಜನೆಯಡಿ 210 ಕೋಟಿ ರೂ.ಗೂ ಹೆಚ್ಚು ಅನುದಾನ ಬಂದಿದೆ. ಗ್ಯಾರಂಟಿ ಬಗ್ಗೆ ಋಣಾತ್ಮಕವಾಗಿ ಮಾತನಾಡುವುದು ಸರಿಯಲ್ಲ. ಸದ್ಯ ಗೃಹಜ್ಯೋತಿಗೆ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತಿದೆ. ಗೃಹಲಕ್ಷಿಗೆ ಅರ್ಜಿ ವಿತರಣೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.
— ಉಮಾನಾಥ ಶೆಟ್ಟಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ