

ಪುತ್ತೂರು: ಏ.26 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆ ದಿನದಂದು 206 ಪುತ್ತೂರು ವಿಧಾನ ಸಭಾ ಕ್ಷೇತ್ರದ ಮತದಾರರು ತಮ್ಮ ಮತಗಟ್ಟೆಯಲ್ಲಿ ಮತಚಲಾಯಿಸುವ ಮೂಲಕ ಶೇ.100 ಮತಚಲಾಯಿಸುವ ಕ್ಷೇತ್ರ ನಮ್ಮದಾಗಬೇಕು ಎಂದು ಪುತ್ತೂರು ಸಹಾಯಕ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಹೇಳಿದರು.
ಏ.22 ರಂದು ಸಂಜೆ ಕಿಲ್ಲೆ ಮೈದಾನದಲ್ಲಿ ನಡೆಯುವ ಸೋಮವಾರ ಸಂತೆಯಲ್ಲಿ ಭಾರತ ಚುನಾವಣಾ ಆಯೋಗ, ದ.ಕ.ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಸ್ಪೀಪ್ ಸಮಿತಿ, ತಾಲೂಕು ಆಢಳಿತ ಹಾಗೂ ತಾಲೂಕು ಪಂಚಾಯತ್, ನಗರಸಭೆ, ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇವುಗಳ ಸಹಯೋಗದಲ್ಲಿ ನಡೆದ ಮತದಾನ ಜಾಗೃತಿ ಕುರಿತ ಬೀದಿನಾಟಕ ಪ್ರದರ್ಶನದಲ್ಲಿಅವರು ಮಾತನಾಡಿದರು.
ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಸಂತೆ ಮಾರುಕಟ್ಟೆಯಲ್ಲಿ ನಾಟಕ ಪ್ರದರ್ಶನ ಮಾಡಲಾಗಿದೆ. ನಾಟಕದಲ್ಲಿ ತಿಳಿಸುವಂತೆ ಜಾಗೃತ, ಪ್ರಜ್ಞಾವಂತ ಮತದಾರರಾಗಿ ನೈತಿಕ ಮತಚಲಾಯಿಸುವ ಪ್ರಕ್ರಿಯೆಯಲ್ಲಿ ತಾವೆಲ್ಲರೂ ತೊಡಗಬೇಕು ಎಂದು ಹೇಳಿದರು.
ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹನಮ ರೆಡ್ಡಿ ಮಾತನಾಡಿ, ಸ್ವೀಪ್ ಸಮಿತಿಯ ವತಿಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂತೆಯೇ ಇಂದು ಸಂತೆಯಲ್ಲಿ ನೀಡುವ ಮೂಲಕ ನಾಗರಿಕರನ್ನು ತಲುಪುವ ಪ್ರಯತ್ನವನ್ನು ಮಾಡಲಾಗಿದೆ. ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಸಹಕಾರವನ್ನು ನೀಡಿದ್ದಾರೆ. ನಾಟಕದ ಸಂದೇಶದಂತೆ ಎಲ್ಲರೂ ತಪ್ಪದೆ ಏ.26 ರಂದು ಮತಚಲಾಯಿಸುವಂತೆ ಹೇಳಿದರು.
ರಂಗನಿರ್ದೇಶಕ, ಪತ್ರಕರ್ತ ಮೌನೇಶ್ ವಿಶ್ವಕರ್ಮ ಅವರ ನಿರ್ದೇಶನದಲ್ಲಿ ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಮತದಾರರ ಸಾಕ್ಷರತಾ ಸಂಘದ ವಿದ್ಯಾರ್ಥಿನಿಯರು ಬೀದಿನಾಟಕವನ್ನು ಪ್ರದರ್ಶಿಸಿದರು. ಸಂತೆಗೆ ಆಗಮಿಸಿದ್ದ ಸಾರ್ವಜನಿಕರು ವೀಕ್ಷಿಸಿದರು.
ಈ ಸಂದರ್ಭ ಪುತ್ತೂರು ನಗರ ಸಭೆ ಪೌರಾಯುಕ್ತ ಬದ್ರುದಿನ್, ವಿಟ್ಲ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಸತ್ಯನಾರಾಯಣ, ಕಂದಾಯ ಇಲಾಖೆ, ತಾಲೂಕು ಪಂಚಾಯತ್, ನಗರ ಸಭೆಯ ಅಧಿಕಾರಿಗಳು, ಮತದಾರರು ಉಪಸ್ಥಿತರಿದ್ದರು.