ಅಸಮರ್ಪಕ ರಾಜಕಾಲುವೆಯಿಂದ ಸಮಸ್ಯೆ ಸರಮಾಲೆ Puttur

ರಾಜಕಾಲುವೆ ಪಕ್ಕದಲ್ಲಿ ಅಗೆದ ಸ್ಥಳದಲ್ಲಿ ಕುಸಿತವಾಗಿ ಮನೆಗೆ ಅಪಾಯ ಆಗಿರುವುದು.
ರಾಜಕಾಲುವೆ ಪಕ್ಕದಲ್ಲಿ ಅಗೆದ ಸ್ಥಳದಲ್ಲಿ ಕುಸಿತವಾಗಿ ಮನೆಗೆ ಅಪಾಯ ಆಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಪುತ್ತೂರಿನ ಹಲವೆಡೆ ಮಳೆ ನೀರಿಂದ ರಸ್ತೆಗೂ ಅಪಾಯ ಸಂಭವ
  • ಕ್ರಮಕೈಗೊಳ್ಳದ ಸ್ಥಳೀಯಾಡಳಿತ
ಪುತ್ತೂರು: ಅವೈಜ್ಞಾನಿಕವಾಗಿ ರಾಜಕಾಲುವೆಯ ಸಮೀಪದಲ್ಲಿ ಅಗೆದ ಪ್ರದೇಶಕ್ಕೆ ಮಳೆ ನೀರು ನುಗ್ಗಿದ್ದಲ್ಲದೇ, ಒಂದು ಭಾಗದ ಧರೆ ಕುಸಿತವಾಗಿ ಪಕ್ಕದಲ್ಲಿರುವ ಮನೆಗೆ ಅಪಾಯ ಎದುರಾಗಿದೆ. ಮಳೆ ಇನ್ನಷ್ಟು ಬಂದಲ್ಲಿ ಮುಖ್ಯ ರಸ್ತೆ, ಗ್ಯಾಸ್ ಪಂಪ್ ಭಾಗ ಕುಸಿತವಾಗುವ ಜತೆಗೆ ಹಲವು ಅನಾಹುತವಾಗುವ ಸಂಭವಿದೆ.
ಮಹಿಳಾ ಪೊಲೀಸ್ ಠಾಣೆಯ ಪಕ್ಕದಲ್ಲಿ ಹಳೆಯ ಕಟ್ಟಡವೊಂದನ್ನು ತೆರವು ಮಾಡಿ ಆ ಜಾಗದಲ್ಲಿ ಬೃಹತ್ ಗುಂಡಿ ನಿರ್ಮಾಣ ಮಾಡಲಾಗಿತ್ತು. ಮಣ್ಣು ಕುಸಿತವಾದಂತೆ ಕಾಂಕ್ರೀಟ್ ಲೇಪನವನ್ನೂ ಮಾಡಲಾಗಿತ್ತು. ರಾಜಕಾಲುವೆಗೆ ತಡೆಗೋಡೆ ನಿರ್ಮಾಣದ ನೆಪದಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಳ್ಳುವ ಕಾರ್ಯವಾಗಿದೆ.
ರಾಜಕಾಲುವೆಗೆ ಮಣ್ಣು ಕಲ್ಲು ತುಂಬಿದ ಪರಿಣಾಮ ಮಳೆ ನೀರು ಹೋಗಲು ಜಾಗವಿಲ್ಲದೆ ಬೃಹತ್ ಹೊಂಡದೊಳಗೆ ನುಗ್ಗಿದೆ. ಇದರ ಪರಿಣಾಮ ರಸ್ತೆಯ ಇನ್ನೊಂದು ಭಾಗದ ಮಣ್ಣು ಕುಸಿತವಾಗಿ ಪಕ್ಕದಲ್ಲಿನ ಮನೆಯ ಆವರಣದವರೆಗೆ ಅಪಾಯವಾಗಿದೆ. ರಾಜಕಾಲುವೆಯಿಂದ ಇನ್ನಷ್ಟು ನೀರು ನುಗ್ಗಿದಲ್ಲಿ, ರಸ್ತೆಯ ಭಾಗವೂ ಅಪಾಯ ಎದುರಿಸಲಿದೆ.
* ಚರಂಡಿ ಬಂದ್!: ಮುಖ್ಯರಸ್ತೆಯ ಬದಿಯಲ್ಲಿದ್ದ ಚರಂಡಿ ಮುಚ್ಚಿದ್ದು, ನಗರ ಸಭೆಯಿಂದ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡುವ ಗೋಜಿಗೆ ಹೋಗಿಲ್ಲ. ರಾಜಕಾಲುವೆಗೆ ಮಣ್ಣು ತುಂಬಿದ ವಿಚಾರದಲ್ಲಿ ವಿಜಯವಾಣಿ ವರದಿ ಮಾಡಿದ್ದು, ಅದನ್ನು ತೆರವು ಗೊಳಿಸಲು ಮುಂದಾಗಿರಲಿಲ್ಲ. ಇದರಿಂದ ಮಳೆ ನೀರು ಎಲ್ಲೆಂದರಲ್ಲಿ ಹರಿದು ಸಮಸ್ಯೆಯಾಗುತ್ತಿದೆ.
* ರಾಜಕಾಲುವೆ ಕಾಮಗಾರಿ ಅಕ್ರಮ?: ನಗರ ಸಭೆ ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಮಾಡುವುದಕ್ಕೆ ಖಾಸಗಿಯವರಿಗೆ ಅವಕಾಶ ನೀಡಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಜಿಲ್ಲಾಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ. ಹಾಕಿದ್ದು, ಅನುಮತಿ ನೀಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
* ಪುತ್ತೂರಿನ ಹಲವು ಕಡೆ ಅಪಾಯ: ಪುತ್ತೂರು ನಗರ ಸಭೆಯ ವ್ಯಾಪ್ತಿಯಲ್ಲಿ ಅಗೆತ ಮಾಡುವಾಗ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಎಪಿಎಂಸಿ ರಸ್ತೆಯಲ್ಲಿ ಒಂದು ಭಾಗದಲ್ಲಿ ಅಗೆದು ಹಾಕಿದ್ದು, ಮೂರು ಕಡೆಯಿಂದ ಕುಸಿತವಾಗಿದೆ. ಇದರ ಜತೆಗೆ ಹಲವು ಕಡೆಯಲ್ಲಿ ಎಗ್ಗಿಲ್ಲದೆ ಅಗೆತವಾಗುತ್ತಿದ್ದು, ಅಪಾಯ ಆಹ್ವಾನಿಸುತ್ತಿದೆ.

ಜಿಲ್ಲಾಧಿಕಾರಿ ಆದೇಶ ಲೆಕ್ಕಕ್ಕಿಲ್ಲ!

ಎರಡು ವರ್ಷಗಳಿಂದ ನಡೆಯುವ ಭೂಕುಸಿತದ ಬಳಿಕ ೩ ಅಡಿ ಅಗೆಯಲು ಸ್ಥಳೀಯ ಕಂದಾಯ ಇಲಾಖೆಯ ಒಪ್ಪಿಗೆ ಪಡೆಯಬೇಕಾಗಿದೆ. ೬ ಮೀಟರ್‌ನಿಂದ ಅಽಕ ಆಳ ಅಥವಾ ಎತ್ತರದಿಂದ ಅಗೆಯಲು ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆಯಬೇಕೆಂಬ ಆದೇಶ ಹೊರಡಿಸಲಾಗಿದೆ. ಆದರೆ ಈ ಆದೇಶ ಎಲ್ಲೂ ಜಾರಿಯಾಗದಿರುವುದು ಕಂಡು ಬರುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
"

ಪುತ್ತೂರಿನಲ್ಲಿ ಅಧಿಕಾರಿಗಳಿಗೆ ಸಮಸ್ಯೆಗಳು ಯಾವುದೂ ಕಾಣಿಸುವುದಿಲ್ಲ. ಅಪಾಯಗಳು ಆದ ಮೇಲೆ ಕಟ್ಟು ನಿಟ್ಟಿನಲ್ಲಿ ನಿಯಮ ಜಾರಿಗೊಳಿಸಿ ಎಲ್ಲರಿಗೂ ಸಮಸ್ಯೆ ಮಾಡಲಾಗುತ್ತದೆ.

— ನವೀನ್, ವಾಹನ ಸವಾರ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net