ದರ್ಬೆ ವೃತ್ತಕ್ಕೆ ನಾಮಕರಣ

darbe new
Published on

ಶ್ರವಣ್‌ಕುಮಾರ್ ನಾಳ ಪುತ್ತೂರು

ನಗರಸಭೆಯ ಎಸ್‌ಎಫ್‌ಸಿ ಅನುದಾನದಲ್ಲಿ ನಿರ್ಮಾಣಗೊಂಡ ದರ್ಬೆ ವೃತ್ತದ ಕಾಮಗಾರಿ ಪೂರ್ಣಗೊಂಡು ಇಲ್ಲಿನ ಟ್ರಾಫಿಕ್ ಒತ್ತಡ ಬಹುತೇಕ ಸಲೀಸಲಾಗಿದೆ. ಈ ಮಧ್ಯೆ ಆಧುನಿಕ ಪುತ್ತೂರು ನಿರ್ಮಾತೃ ಹಾಗೂ ಗಾಂಧಿವಾದಿ ಚಿಲ್ಮೆತ್ತಾರು ಕೋಚಣ್ಣ ರೈ ಅವರ ಹೆಸರನ್ನು ಈ ವೃತ್ತಕ್ಕೆ ನಾಮಕರಣಗೊಳಿಸಲು ನಗರಸಭೆಯಿಂದ ಅಂತಿಮ ಸಿದ್ಧತೆ ನಡೆದಿದೆ.

ಮೂಲತಃ ಪುತ್ತೂರಿನ ಚಿಲ್ಮೆತ್ತಾರು ನಿವಾಸಿಯಾಗಿರುವ ಕೋಚಣ್ಣ ರೈ, 1980-81ರಲ್ಲಿ ಪುತ್ತೂರಿನ ತಹಸೀಲ್ದಾರರಾಗಿ ಸೇವೆ ಸಲ್ಲಿಸಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಬಿರುಮಲೆ ಗುಡ್ಡ ಅಭಿವೃದ್ಧಿಗೆ ಪಣತೊಟ್ಟ ಅಧಿಕಾರಿ. ಇಂದು ನಾವು ಪುತ್ತೂರಿನಲ್ಲಿ ಕಾಣುವ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ವಿಶಾಲ ಪ್ರದೇಶ ಹಾಗೂ ಹಚ್ಚಹಸುರಿನ ತಾಣವಾದ ಬಿರುಮಲೆ ಗುಡ್ಡ ಇವರ ದೂರದೃಷ್ಟಿಯ ಯೋಜನೆಗಳು.

1980ರ ದಶಕದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಸುಮಾರು 12 ಎಕರೆ ಜಮೀನು ಒಕ್ಕಲು ಮಸೂದೆ ಅನ್ವಯ ಹಿಂದು ಹಾಗೂ ಹಿಂದುಯೇತರ ಒಕ್ಕಲುದಾರರ ಕೈಯಲ್ಲಿದ್ದರೂ ಹಡಿಲು ಬಿದ್ದಿತ್ತು. ಚಿಲ್ಮೆತ್ತಾರು ಕೋಚಣ್ಣ ರೈ ಪುತ್ತೂರಿನ ತಹಸೀಲ್ದಾರರಾಗಿದ್ದ ಸಂದರ್ಭ ದೇವಸ್ಥಾನಕ್ಕೆ ಸಂಬಂಧಿಸಿದ ಈ 12 ಎಕರೆ ಜಮೀನನ್ನು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕಾಗಿ ಭೂ ಸ್ವಾಧೀನಪಡಿಸಿಕೊಂಡಿದ್ದರು. ಇಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ವಿಶಾಲ ರಥಬೀದಿ, ಕಂಬಳಗದ್ದೆ ಸೇರಿದಂತೆ 12 ಎಕರೆ ಜಮೀನು ದೇವಸ್ಥಾನದ ಅಧೀನದಲ್ಲಿದೆ ಎಂದಾದರೆ ಇದಕ್ಕೆ ಮೂಲ ಕಾರಣ ಚಿಲ್ಮೆತ್ತಾರು ಕೋಚಣ್ಣ ರೈಯವರ ದೃಢ ನಿರ್ಧಾರ.

ಬಿರುಮಲೆ ಗುಡ್ಡ ಅಭಿವೃದ್ಧಿ

ಪುತ್ತೂರಿನ ಅತೀ ಎತ್ತರ ಪ್ರದೇಶ ಬಿರುಮಲೆ ಗುಡ್ಡ ನಿರಂತರ ಅತಿಕ್ರಮಣಗೊಳ್ಳುತ್ತಿದ್ದು, ಇದನ್ನು ಅತಿಕ್ರಮಣಗೊಳಿಸದಂತೆ ತಡೆದು ಸುಂದರ ಉದ್ಯಾನವರ, ಬೆಟ್ಟ ಅಭಿವೃದ್ಧಿ ಹಾಗೂ ಬಿರುಮಲೆ ಗುಡ್ಡವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಚಿಲ್ಮೆತ್ತಾರು ಕೋಚಣ್ಣ ರೈ ನಿರ್ಧಾರವೇ ಕಾರಣ. ಈ ಕಾರಣಕ್ಕಾಗಿ ಬಿರುಮಲೆ ಅಭಿವೃದ್ಧಿ ಸಮಿತಿ ಪುತ್ತೂರು ನಿರ್ಮಾತೃ ಹಾಗೂ ಗಾಂಧಿವಾದಿ ಚಿಲ್ಮೆತ್ತಾರು ಕೋಚಣ್ಣ ರೈ ಹೆಸರನ್ನು ದರ್ಬೆ ವೃತ್ತಕ್ಕೆ ನಾಮಕರಣ ಮಾಡುವಂತೆ ನಗರಸಭೆಗೆ ಶಿಾರಸು ಮಾಡಿದೆ.

ಸಂಚಾರಿಗಳಿಗೆ ವೃತ್ತ ಪ್ರಧಾನ ಜಂಕ್ಷನ್

ಪುತ್ತೂರು ನಗರಕ್ಕೆ ಪ್ರವೇಶಿಸುವ ಮತ್ತು ನಿರ್ಗಮಿಸುವ ವಾಹನಗಳ ಪಾಲಿಗೆ ದರ್ಬೆ ವೃತ್ತ ಪ್ರಧಾನ ಜಂಕ್ಷನ್. ಮೈಸೂರು, ಮಡಿಕೇರಿಯಿಂದ ಬಂದ ಹೆದ್ದಾರಿ ಪುತ್ತೂರು ದರ್ಬೆ ಬೈಪಾಸ್ ಜಂಕ್ಷನ್‌ನಲ್ಲಿ ಕವಲೊಡೆಯುತ್ತಿದ್ದು, ಪ್ರಧಾನ ಹೆದ್ದಾರಿ ತೆಂಕಿಲ ಮೂಲಕ ಮಂಜಲ್ಪಡ್ಪು ದಾಟಿಕೊಂಡು ಮಂಗಳೂರು ಕಡೆಗೆ ಸಾಗುತ್ತದೆ. ನಗರದೊಳಗೆ ಪ್ರವೇಶ ಪಡೆಯುವ ರಸ್ತೆಯು ಇಲ್ಲಿಂದ ಫಿಲೋನಗರ ಮೂಲಕ ದರ್ಬೆ ವೃತ್ತದ ಬಳಿ ಜಂಕ್ಷನ್ ಸೃಷ್ಟಿಸುತ್ತದೆ. ಇದೇ ವೃತ್ತದಿಂದ ಪೂರ್ವಾಭಿಮುಖವಾಗಿ ಸಾಗುವ ಮಂಜೇಶ್ವರ- ಸುಬ್ರಹ್ಮಣ್ಯ ಹೆದ್ದಾರಿ ಪುರುಷರಕಟ್ಟೆ ಕಡೆಗೆ ಸಾಗುತ್ತದೆ.

ಟಿಪ್ಪು ಹೆಸರಿಡಲು ಕಾಂಗ್ರೆಸ್ ಮನವಿ ದರ್ಬೆ ವೃತ್ತ ನಿರ್ಮಾಣಕ್ಕೂ ಮುನ್ನ ಇಲ್ಲಿ ಸಣ್ಣ ವಿದ್ಯುತ್ ಕಂಬ ಇದ್ದು, ಇದನ್ನೆ ದರ್ಬೆ ವೃತ್ತ ಎನ್ನಲಾಗುತ್ತಿತ್ತು. ಈ ಹಿಂದೆ ನಗರಸಭೆ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರವಿದ್ದು, ಈ ವೃತ್ತಕ್ಕೆ ಟಿಪ್ಪು ಸುಲ್ತಾನ್ ವೃತ್ತ ಎಂದು ನಾಮಕರಣಗೊಳಿಸುವಂತೆ ಕೆಲವು ಕಾಂಗ್ರೆಸ್ ಮುಖಂಡರು ಆಗಿನ ಶಾಸಕರು ಹಾಗೂ ನಗರಸಭೆಗೆ ಮನವಿ ಮಾಡಿದ್ದರು. ಪುತ್ತೂರಿಗೆ ಟಿಪ್ಪು ಸುಲ್ತಾನ್‌ನ ಕೊಡುಗೆ ಏನು, ಈ ಹೆಸರು ಇಡಲು ಕಾರಣ ಏನು ಎಂಬುದರ ಬಗ್ಗೆ ವಿವರಣೆ ಕೇಳಿದ್ದ ನಂತರ ಈ ಬಗ್ಗೆ ಮುಖಂಡರೇ ಸುಮ್ಮನಾಗಿದ್ದರು.

ದರ್ಬೆ ವೃತ್ತಕ್ಕೆ ಚಿಲ್ಮೆತ್ತಾರು ಕೋಚಣ್ಣ ರೈ ಅವರ ಹೆಸರನ್ನು ನಾಮಕರಣಗೊಳಿಸುವಂತೆ ಬಿರುಮಲೆ ಅಭಿವೃದ್ಧಿ ಸಮಿತಿ ಮನವಿ ಮಾಡಿದೆ. ಈ ಬಗ್ಗೆ ಸಲಹೆ, ಆಕ್ಷೇಪಣೆಗಳಿದ್ದರೆ ತಕ್ಷಣ ನಗರಸಭೆಗೆ ನೀಡುವಂತೆ ಪ್ರಕಟಣೆಯನ್ನೂ ಹೊರಡಿಸಲಾಗಿದೆ. ಕೆಲವೇ ದಿನಗಳಲ್ಲಿ ಚಿಲ್ಮೆತ್ತಾರು ಕೋಚಣ್ಣ ರೈ ಹೆಸರು ನಾಮಕರಣ ಮಾಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ರೂಪಾ ಶೆಟ್ಟಿ, ಪೌರಾಯುಕ್ತರು ಪುತ್ತೂರು ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net