ಪುತ್ತೂರು ಮಗು ಕರುಣಿಸಿದ ಪ್ರಕರಣ - ಸಂತ್ರಸ್ತೆಯ ವಿವಾಹವಾಗುವ ತನಕ ಆತನ ಮನೆ ಎದುರು ಧರಣಿ

mng--3 oct prathiba
Published on

ಮಂಗಳೂರು: ಪುತ್ತೂರಿನಲ್ಲಿ ಅವಿವಾಹಿತ ಯುವತಿಗೆ ಜನಿಸಿದ ಮಗು ಸ್ಥಳೀಯ ನಿವಾಸಿ ಕೃಷ್ಣ ರಾವ್ ಎಂಬಾತನದ್ದೇ ಎಂದು ಡಿಎನ್‌ಎ ಪರೀಕ್ಷೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಆತ ಮಗುವಿನ ತಾಯಿಯನ್ನು ಇನ್ನಾದರೂ ವಿವಾಹ ಆಗಲೇ ಬೇಕು. ತಪ್ಪಿದಲ್ಲಿ ಮದುವೆಯಾಗುವ ತನಕ ಆತನ ಮನೆಯ ಮುಂದೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನ್ಯಾಯಕ್ಕಾಗಿ ಧರಣಿ ನಡೆಸುವುದಾಗಿ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ರಾವ್ ಒಪ್ಪಿದಲ್ಲಿ ಆತನ ಜೊತೆ ಯುವತಿಯ ವಿವಾಹವನ್ನು ನಾನೇ ಸ್ವಂತ ಖರ್ಚಿನಲ್ಲಿ ಮಾಡಿಸುತ್ತೇನೆ. ಈ ಪ್ರಕರಣದಲ್ಲಿ ತಾರ್ಕಿಕ ಅಂತ್ಯ ಕಾಣುವ ತನಕ ಬಿಡುವುದಿಲ್ಲ. ಪ್ರೀತಿ, ಪ್ರೇಮದ ಹೆಸರಲ್ಲಿ ಲೈಂಗಿಕ ಚಟುವಟಿಕೆ ನಡೆಸಿ, ಬಳಿಕ ಅರ್ಧದಲ್ಲೇ ಕೈಬಿಡುವ ಘಟನೆಗಳು ಮರುಕಳಿಸಬಾರದು. ಇದೊಂದು ಜಿಲ್ಲೆಗೆ ಕಪ್ಪು ಚುಕ್ಕೆ. ಹಾಗಾಗಿ ಈ ಘಟನೆ ಪ್ರೀತಿಸಿ, ಮಗು ಕರುಣಿಸಿ ಯುವತಿಯ ಬಾಳನ್ನು ಅರ್ಧಕ್ಕೇ ಕೈ ಬಿಡುವವರಿಗೆ ಒಂದು ಪಾಠವಾಗಬೇಕು ಎಂದರು.

ಯುವತಿ ಜೊತೆ ಎಂಟು ವರ್ಷಗಳಿಂದ ಸಂಪರ್ಕದಲ್ಲಿದ್ದ ಕೃಷ್ಣ ರಾವ್, ಕೊನೆಗೆ ವಿವಾಹವಾಗುವುದಾಗಿ ನಂಬಿಸಿ ಕೈಕೊಟ್ಟಿದ್ದಾನೆ. ಆತನ ಮನೆಯವರೂ ಈಗ ಅವರ ಮದುವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಘಟನೆಗಳು ಸಮಾಜದಲ್ಲಿ ತಪ್ಪು ಸಂದೇಶಕ್ಕೆ ಕಾರಣವಾಗುತ್ತದೆ. ಇವರಿಬ್ಬರನ್ನು ಒಂದುಗೂಡಿಸಿ ಸಂತ್ರಸ್ತೆಗೆ ನ್ಯಾಯಕೊಡಿಸುವಲ್ಲಿ ಹಿಂದು ಸಂಘಟನೆಗಳು, ಸ್ವಾಮೀಜಿಗಳು, ರಾಜಕೀಯ ಮುಖಂಡರು ಕೈಚೆಲ್ಲುತ್ತಿರುವುದು ಸರಿಯಲ್ಲ.

ಸಂತ್ರಸ್ತೆಯನ್ನು ಸಮುದಾಯ ಸಂಘಟನೆಯವರು ಕೈಬಿಟ್ಟಿದ್ದಾರೆ, ಹಾಗಿರುವಾಗ ಕೇವಲ ಸಮುದಾಯದ ಮುಖಂಡ ನಂಜುಂಡಿ ಮಾತ್ರ ಧೈರ್ಯ ತುಂಬಿ ಬೆಂಬಲಕ್ಕೆ ನಿಂತಿದ್ದಾರೆ. ಈ ಘಟನೆಯಲ್ಲಿ ಸಂತ್ರಸ್ತೆಗೆ ನ್ಯಾಯಕೊಡಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು. ಸಮಾಜಕ್ಕೆ ಒಳ್ಳೆಯ ಸಂದೇಶ ಹೋಗಬೇಕು ಎಂದು ಪ್ರತಿಭಾ ಕುಳಾಯಿ ವಿನಂತಿಸಿದರು.

ಸದ್ಯ ಜಾಮೀನಿನಲ್ಲಿರುವ ಕೃಷ್ಣ ರಾವ್ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ನೀಡುವ ಹೇಳಿಕೆಯನ್ನು ಆಧರಿಸಿ ಮುಂದೆ ಹೋರಾಟದ ರೂಪುರೇಷೆ ಹಾಕಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಸಂತ್ರಸ್ತೆಗೆ ನ್ಯಾಯ ಕೊಡಿಸಿಯೇ ಸಿದ್ಧ ಎಂದು ಪ್ರತಿಭಾ ಕುಳಾಯಿ ಹೇಳಿದರು.

ಸಂತ್ರಸ್ತೆಯ ತಾಯಿ ನಮಿತಾ, ಸಮುದಾಯದ ಕಾರ್ಯಕರ್ತೆ ಅರ್ಚನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net