

ಪುತ್ತೂರು: ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ವಠಾರದ ಗಾಂಧೀಕಟ್ಟೆಯ ಬಳಿ ವೃದ್ಧ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಮೂರು ಪವನ್ ತೂಕದ ಚಿನ್ನದ ಸರವನ್ನು ಕಳ್ಳಿಯರ ತಂಡವೊಂದು ಎಗರಿಸಿಕೊಂಡು ಪರಾರಿಯಾದ ಘಟನೆ ಶನಿವಾರ ಸಂಜೆ ನಡೆದಿದೆ.
ಬಂಟ್ವಾಳ ತಾಲೂಕಿನ ಕನ್ಯಾನ ಸಮೀಪದ ನಂದರಬೆಟ್ಟು ನಿವಾಸಿ ಸುಂದರಿ ಚಿನ್ನದ ಸರ ಕಳಕೊಂಡವರು.
ಸುಂದರಿ ಅವರು ಶನಿವಾರ ಸಂಜೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ವಾಣಿಜ್ಯ ಸಂಕೀರ್ಣದಲ್ಲಿ ಗಾಂಧೀಕಟ್ಟೆ ಪಕ್ಕದಲ್ಲಿರುವ ಬ್ಯಾಕರಿ ಅಂಗಡಿಯೊಂದರಲ್ಲಿ ಬ್ಯಾಕರಿ ತಿಂಡಿಗಳನ್ನು ಖರೀದಿಸಿ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದಂತೆಯೇ ನಾಲ್ವರಿದ್ದ ಕಳ್ಳಿಯರ ತಂಡವೊಂದು ಏಕಾಏಕಿಯಾಗಿ ಅವರ ಕುತ್ತಿಗೆಯಲ್ಲಿದ್ದ 25 ಗ್ರಾಂ ತೂಕದ ಚಿನ್ನದ ಸರವನ್ನು ಎಗರಿಸಿಕೊಂಡು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.
ಚಿನ್ನದ ಸರ ಕಳಕೊಂಡ ಮಹಿಳೆ ಈ ವಿಚಾರವನ್ನು ನಗರದ ಜಂಕ್ಷನ್‌ನಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸೊಬ್ಬರಿಗೆ ತಿಳಿಸಿ, ಬಳಿಕ ಪುತ್ತೂರು ನಗರ ಠಾಣೆಗೆ ತೆರಳಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.