ಪುತ್ತೂರು ವಿಭಾಗ ಸರ್ಕಾರಿ ಬಸ್ ಓಡಾಟ ಹೆಚ್ಚಳ

KSRTC Bus
Published on

ಶ್ರವಣ್ ಕುಮಾರ್ ನಾಳ ಪುತ್ತೂರು

ಕರೊನಾ ಲಾಕ್‌ಡೌನ್ ಬಳಿಕ ಎಂಟು ತಿಂಗಳ ಅವಧಿಯ ಅನಂತರ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಸರ್ಕಾರಿ ಬಸ್‌ಗಳ ಓಡಾಟ ಹೆಚ್ಚಳವಾಗಿದ್ದು, ಆದಾಯ ಸಂಗ್ರಹವೂ ಏರಿಕೆಯಾಗಿದೆ.

ಪ್ರತಿದಿನ 75 ಲಕ್ಷ ರೂ. ಆದಾಯ ನಿರೀಕ್ಷೆಯಲ್ಲಿರುತ್ತಿದ್ದ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಕರೊನಾ ಸಂದರ್ಭ ಬಸ್‌ಗಳ ಓಡಾಟವಿಲ್ಲದೆ ಆದಾಯ ಪಾತಾಳಕ್ಕೆ ಕುಸಿದಿತ್ತು. ಸದ್ಯ ಹೆಚ್ಚಿನ ರೂಟ್‌ಗಳಲ್ಲಿ ಓಡಾಟ ಪುನರಾರಂಭಗೊಂಡಿದ್ದು ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದ್ದು ಆರ್ಥಿಕ ಪರಿಸ್ಥಿತಿ ಚೇತರಿಕೆಯ ಹಂತದಲ್ಲಿದೆ.

ಶೇ.80ರಷ್ಟು ಆದಾಯ: ಕರೊನಾಕ್ಕಿಂತ ಮೊದಲೇ ನಿರೀಕ್ಷಿತ ಆದಾಯದಲ್ಲಿ ದೈನಂದಿನ 60 ಲಕ್ಷ ರೂ.ಯಷ್ಟು ಸಂಗ್ರಹಗೊಂಡು 15 ಲಕ್ಷ ರೂ. ಕೊರತೆ ಉಂಟಾಗುತ್ತಿತ್ತು. ತಿಂಗಳ ಅಂಕಿ ಅಂಶದಲ್ಲಿ ಕೆಲವು ಘಟಕ ಲಾಭದಲ್ಲಿದ್ದರೆ, ಇನ್ನು ಕೆಲವು ಘಟಕ ನಷ್ಟ ಅನುಭವಿಸುತ್ತವೆ. ಕರೊನಾ ಅನಂತರವಂತೂ ನಷ್ಟದ ಅಂತರ ದ್ವಿಗುಣಗೊಂಡಿತು. ವಿಭಾಗ ವ್ಯಾಪ್ತಿಯಲ್ಲಿ 560 ಬಸ್‌ಗಳಿದ್ದು, ಅವುಗಳಿಗೆ ಪ್ರತಿ ಕಿ.ಮೀ.ಗೆ 20,160 ರೂ. ಖರ್ಚು ಬೇಕಾಗುತ್ತದೆ. ಪ್ರಸಕ್ತ ಎರಡು ತಿಂಗಳಿನಿಂದ ಬಸ್ ಓಡಾಟ ಹೆಚ್ಚಳವಾಗಿದ್ದು ಹಿಂದಿನ ಅಂಕಿ ಅಂಶಕ್ಕೆ ಹೋಲಿಸಿದರೆ ಪ್ರಸ್ತುತ ಶೇ.80ರಷ್ಟು ಆದಾಯ ಸಂಗ್ರಹವಾಗುತ್ತಿದೆ.

ಬಸ್‌ನ ಒಂದು ಕಿ.ಮೀ. ಓಡಾಟಕ್ಕೆ 37 ರೂ. ಖರ್ಚು ತಗಲುತ್ತದೆ. ಲಾಕ್‌ಡೌನ್ ಪೂರ್ವದಲ್ಲಿ ಪ್ರತಿ ಕಿ.ಮೀ.ಗೆ 32 ರೂ. ಆದಾಯ ಸಿಗುತಿತ್ತು. ಲಾಕ್‌ಡೌನ್ ಅನಂತರ ಬಸ್ ಓಡಾಟ ಆರಂಭಿಸಿದ್ದರೂ ಸೀಮಿತ ಪ್ರಯಾಣಿಕರಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಿದ ಕಾರಣ ಆದಾಯ 12 ರೂ.ಗೆ ಇಳಿದಿತ್ತು. ಎರಡು ತಿಂಗಳಿನಿಂದ ನಿರ್ಬಂಧ ಸಡಿಲಿಸಿ ಬಸ್ ಓಡಾಡುತ್ತಿದ್ದು, ಆದಾಯ 28 ರೂ. ಗೆ ತಲುಪಿದೆ. ಹಂತ ಹಂತವಾಗಿ ಏರುಗತಿ: ಮೇ 19ರಿಂದ ಕೆಎಸ್‌ಆರ್‌ಟಿಸಿ ಉಪವಿಭಾಗ ಎಲ್ಲ ಘಟಕ ವ್ಯಾಪ್ತಿಯಲ್ಲಿ 50 ಬಸ್ ಓಡಾಟ ಆರಂಭಿಸಿತ್ತು. ಜೂನ್ 7ಕ್ಕೆ 130 ಬಸ್‌ಗಳು ಓಡಾಟ ಪ್ರಾರಂಭಿಸಿತ್ತು. ಡಿಸೆಂಬರ್ ಆರಂಭಕ್ಕೆ ಓಡಾಟ ಸಂಖ್ಯೆ 450ಕ್ಕೆ ಏರಿದೆ. ಆರಂಭದಲ್ಲಿ ಪುತ್ತೂರು-ಮಂಗಳೂರು ನಡುವೆ ಈ ಹಿಂದೆ ಪ್ರತಿ ಕಿ.ಮೀ.ಗೆ 25 ರೂ. ಆದಾಯ ಬರುತ್ತಿದ್ದರೆ, ಮೇ ತಿಂಗಳಲ್ಲಿ 21 ರೂ.ನಷ್ಟು ಸಂಗ್ರಹವಾಗುತ್ತಿತ್ತು. ಪುತ್ತೂರು-ಬೆಂಗಳೂರು ಬಸ್‌ನಲ್ಲಿ 32 ರೂ. ಇದ್ದ ಆದಾಯ 14 ರೂ.ನಿಂದ 20 ರೂ.ನೊಳಗಿತ್ತು. ನವೆಂಬರ್ ಅನಂತರ ಇವುಗಳು ಹಿಂದಿನ ಆದಾಯದ ಹಂತಕ್ಕೆ ತಲುಪಿವೆ. ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಶೇ.85 ರಷ್ಟು ಬಸ್ ಓಡಾಟ ಪುನಾರರಂಭಗೊಂಡಿದೆ. ಈಗಾಗಲೇ ಶೇ.85 ರಷ್ಟು ಆದಾಯ ಸಂಗ್ರಹವಾಗುತ್ತಿದೆ. ಲಾಕ್‌ಡೌನ್ ಬಳಿಕ ಓಡಾಟ, ಆದಾಯ ಸಂಗ್ರಹದಲ್ಲಿ ಚೇತರಿಕೆ ಕಂಡಿದೆ. ಜಯಕರ ಶೆಟ್ಟಿ ವಿಭಾಗ ನಿಯಂತ್ರಣಾಧಿಕಾರಿ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net