ಪುತ್ತೂರು ಬಿಜೆಪಿಯಲ್ಲಿ ಅರುಣೋದಯ? PUTTUR

ಪುತ್ತೂರಿನಲ್ಲಿ ಇತ್ತೀಚೆಗೆ ಎರಡು ದಿನಗಳ ಕಾಲ ನಡೆದ ಬಿಜೆಪಿಯ ಪ್ರಶಿಕ್ಷಣ ಮಹಾಭಿಯಾನದಲ್ಲಿ ಹೈಕೋರ್ಟ್ ವಕೀಲ ಹಾಗೂ ಧಾರ್ಮಿಕ ಮುಖಂಡ ಅರುಣ್ ಶ್ಯಾಮ್ ಉಪಸ್ಥಿತಿ
ಪುತ್ತೂರಿನಲ್ಲಿ ಇತ್ತೀಚೆಗೆ ಎರಡು ದಿನಗಳ ಕಾಲ ನಡೆದ ಬಿಜೆಪಿಯ ಪ್ರಶಿಕ್ಷಣ ಮಹಾಭಿಯಾನದಲ್ಲಿ ಹೈಕೋರ್ಟ್ ವಕೀಲ ಹಾಗೂ ಧಾರ್ಮಿಕ ಮುಖಂಡ ಅರುಣ್ ಶ್ಯಾಮ್ ಉಪಸ್ಥಿತಿ
Published on

ಪ್ರಮುಖ ಮುಖ್ಯಾಂಶಗಳು

  • ಪಕ್ಷದ ನಿರ್ವಾತ ತುಂಬಲು ಯತ್ನ
  • ರಾಜಕೀಯ ವಲಯದಲ್ಲಿ ಹೊಸ ಚರ್ಚೆ
ಪುತ್ತೂರು: ಪುತ್ತೂರಿನಲ್ಲಿ ಇತ್ತೀಚೆಗೆ ಎರಡು ದಿನಗಳ ಕಾಲ ನಡೆದ ಬಿಜೆಪಿಯ ಪ್ರಶಿಕ್ಷಣ ಮಹಾಭಿಯಾನದಲ್ಲಿ ಹೈಕೋರ್ಟ್ ವಕೀಲ ಹಾಗೂ ಧಾರ್ಮಿಕ ಮುಖಂಡ ಅರುಣ್ ಶ್ಯಾಮ್ ಉಪಸ್ಥಿತಿ ರಾಜಕೀಯ ವಲಯದಲ್ಲಿ ಹಲವು ಚರ್ಚೆಗೆ ಗ್ರಾಸವಾಗಿದೆ. ಪ್ರಶಿಕ್ಷಣ ವರ್ಗಗಳಿಗೆ ಪಕ್ಷದ ಚೌಕಟ್ಟಿನಲ್ಲಿ ಗುರುತಿಸಿಕೊಂಡವರನ್ನೇ ಆಹ್ವಾನಿಸುವುದು ವಾಡಿಕೆ. ಆದರೆ ಅರುಣ್ ಶ್ಯಾಮ್ ನೇರವಾಗಿ ಪಕ್ಷದ ಭಾಗವಲ್ಲದಿದ್ದರೂ, ಪಕ್ಷದ ಹಿತೈಷಿಯಾಗಿ ಈಗಾಗಲೇ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭ ಸ್ವಾಗತಿಸುವಲ್ಲಿ ಮುಂಚೂಣಿಯಲ್ಲಿದ್ದರು. ಇವೆಲ್ಲವೂ ಅರುಣ್ ಶ್ಯಾಮ್ ಮುಂದಿನ ವಿಧಾನಸಭೆ ಚುನಾವಣೆಗೆ ಪುತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಯನ್ನು ಹುಟ್ಟುಹಾಕಿದೆ.
*ಕಾರ್ಯಕರ್ತರಲ್ಲಿ ಕುತೂಹಲ: ಕಳೆದ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯನ್ನು ಹೈಕಮಾಂಡ್ ನೀಡದ ಕಾರಣ ಕಾರ್ಯಕರ್ತರು ಮತ್ತು ಬೆಂಬಲಿತ ಮತದಾರರು ಪಕ್ಷೇತರವಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲರಿಗೆ ಮತ ಚಲಾಯಿಸಿದ್ದರು. ಸಾಮಾನ್ಯವಾಗಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಕಾರ್ಯಕರ್ತರಿಗೆ ಮೊದಲೇ ಸುಳಿವು ಇರುತ್ತಿತ್ತು. ಕಳೆದ ಬಾರಿ ಸಂಪ್ರದಾಯ ಮೀರಿದ ಕಾರಣವೇ ಬಿಜೆಪಿಯ ಶಕ್ತಿ ಕೇಂದ್ರದಲ್ಲೇ ಪಕ್ಷಕ್ಕೆ ಸೋಲಾಗಿತ್ತು ಎಂದು ವಿಶ್ಲೇಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಎರಡು ವರ್ಷ ಬಾಕಿ ಇರುವಾಗಲೇ ಅಭ್ಯರ್ಥಿ ಯಾರು ಎಂಬ ಕುತೂಹಲ ಕಾರ್ಯಕರ್ತರಲ್ಲಿ ಸೃಷ್ಟಿಯಾಗಿದೆ.

ಬಿಜೆಪಿ ಈಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಅರುಣ್ ಶ್ಯಾಮ್ ಅವರನ್ನು ಅಭ್ಯರ್ಥಿಯಾಗಿ ಪರೋಕ್ಷವಾಗಿ ಬಿಂಬಿಸಲು ಮತ್ತು ನಿರ್ವಾತವನ್ನು ತುಂಬಲು ಜಿಲ್ಲಾ ಬಿಜೆಪಿ ಅವರನ್ನು ಪ್ರಶಿಕ್ಷಣ ವರ್ಗಕ್ಕೆ ಆಹ್ವಾನಿಸಿದೆ ಎನ್ನಲಾಗುತ್ತಿದೆ.


ಪುತ್ತಿಲರಿಗೆ ಮುಚ್ಚಿತೇ ಬಾಗಿಲು?

ಬಿಜೆಪಿ ಹೈಕಮಾಂಡ್‌ನ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪಕ್ಷದ ಬಾಗಿಲು ಬಹುತೇಕ ಮುಚ್ಚಿದಂತೆ ಕಾಣಿಸುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ಪುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಅರುಣ್ ಕುಮಾರ್ ಪುತ್ತಿಲ ಗೈರಾಗಿದ್ದರು. ಈಗಿನ ಬೆಳವಣಿಗೆಗಳು ಪುತ್ತೂರು ಬಿಜೆಪಿಯಲ್ಲಿ ಹೊಸ ರಾಜಕೀಯ ಸಮೀಕರಣಗಳಿಗೆ ನಾಂದಿ ಹಾಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net