

ಪುತ್ತೂರು: ಮಹಿಳಾ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಕುದ್ದುಪದವು ಸಮೀಪದ ಆದಾಳದ ಯುವತಿಯ ಮೇಲೆ ಚೂರಿಯಿಂದ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ವರ್ಗಾವಣೆ ಮಾಡುತ್ತಿದ್ದ ಸಂದರ್ಭ ಮೃತಪಟ್ಟಿದ್ದಾಳೆ.
ಬಂಟ್ವಾಳ ಮೂಲದ ಯುವಕ ಪದ್ಮರಾಜ್ ದಾಳಿ ನಡೆಸಿದ ವ್ಯಕ್ತಿ ಎಂದು ಹೇಳಲಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಳಿಕೆ ಗ್ರಾಮದ ಆದಾಳ ನಿವಾಸಿ ಗೌರಿ ಮಣಿಯಾಣಿ(೧೮) ಮೃತ ಯುವತಿ.
ಇತ್ತೀಚೆಗೆ ಕಾಲೇಜು ಬಿಟ್ಟು ಸರ್ಕಾರಿ ಬಸ್ ನಿಲ್ದಾಣದ ಬಳಿಯ ಅಂಗಡಿಯೊಂದರಲ್ಲಿ ಉದ್ಯೋಗಕ್ಕೆ ಯುವತಿ ಸೇರಿದ್ದಳು. ಕೆಲಸ ನಿರ್ವಹಿಸುತ್ತಿದ್ದ ಯುವತಿಗೆ ಬಂಟ್ವಾಳ ಮೂಲದ ಯುವಕನಿಂದ ಚಾಕುವಿನಿಂದ ಮೂರಿಂದ ನಾಲ್ಕು ಬಾರಿ ಕುತ್ತಿಗೆಗೆ ದಾಳಿ ನಡೆಸಿದ್ದಾರೆನ್ನಲಾಗಿದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಹಾಗೂ ಮಹಿಳಾ ಪೊಲೀಸ್ ಠಾಣೆಯ ನಡುವಿನ ಜಾಗದಲ್ಲಿ ಈ ದಾಳಿ ನಡೆದಿದೆ. ಗಂಭೀರ ಗಾಯಗೊಂಡ ಯುವತಿಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.