ಸಂಸ್ಕೃತಿ, ದೇಶಪ್ರೇಮ ಅಡಕವಾಗಿರುವ ಶಿಕ್ಷಣ- ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿಕೆ

PTR_3 JUN_1
Published on

ಪುತ್ತೂರು: ಅಂಕ ಪಡೆಯುವುದಷ್ಟೇ ಶಿಕ್ಷಣ ಅಲ್ಲ, ಭಾರತದ ಸಂಸ್ಕೃತಿ ಮತ್ತು ದೇಶಪ್ರೇಮ ಶಿಕ್ಷಣದಲ್ಲಿ ಅಡಕವಾಗಿರಬೇಕು. ಮಕ್ಕಳು ಕೇವಲ ನಮ್ಮ ಸಂಪತ್ತಷ್ಟೇ ಅಲ್ಲ ಅವರು ರಾಷ್ಟ್ರದ ಸಂಪತ್ತು. ಹಾಗಾಗಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟು ರಾಷ್ಟ್ರ ಸಂಪತ್ತನ್ನು ಬೆಳೆಸಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.


ನಗರದ ನಟ್ಟೋಜ ಫೌಂಡೇಷನ್ ಟ್ರಸ್ಟ್‌ನ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಆಶ್ರಯದಲ್ಲಿ ಬಪ್ಪಳಿಗೆಯಲ್ಲಿ ಆಯೋಜಿಸಲಾದ ನೂತನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ದೇಶದ ಅವ್ಯವಸ್ಥೆಗಳಿಗೆ ಶಿಕ್ಷಣ ಸಂಸ್ಥೆಗಳೇ ಹೊಣೆ. ಸಂಸ್ಕಾರಯುತ ಶಿಕ್ಷಣ ಕೊಟ್ಟಾಗ ಅಂಕಗಳೂ ತನ್ನಿಂತಾನೇ ಬರುತ್ತವೆ, ರ್‍ಯಾಂಕ್ ಬಂದೇ ಬರುತ್ತದೆ. ಶಿಸ್ತುಬದ್ಧ ಜೀವನದಿಂದ ಉದ್ದೇಶ ಸಾಧನೆ ಸಾಧ್ಯ. ಆದರೆ ಸಂಸ್ಕಾರತಯುತ ಶಿಕ್ಷಣವನ್ನು ಸಂಸ್ಥೆಗಳು ಕೊಡದೆ ಇದ್ದರೆ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಪಾಲಕರು ನಿರಂತರವಾಗಿ ಸಂಸ್ಥೆಯೊಂದಿಗಿನ ಸಂಪರ್ಕದಲ್ಲಿರಬೇಕು. ಆಗ ಮಕ್ಕಳು ಹಾದಿ ತಪ್ಪುವುದಿಲ್ಲ ಎಂದು ತಿಳಿಸಿದರು.


ಆಡಳಿತ ಮಂಡಳಿಯ ಸದಸ್ಯ ಸುರೇಶ ಶೆಟ್ಟಿ ಮಾತನಾಡಿ ಎಲ್ಲ ವಿದ್ಯೆಗಳು ಭಾರತದಲ್ಲಿವೆ. ಆದಾಗ್ಯೂ ವಿದೇಶಕ್ಕೆ ಹೋಗಿ ಕಲಿಯುತ್ತೇವೆ. ಆದರೆ ಕನಿಷ್ಟ ಮುಂದಿನ ನಮ್ಮ ಸೇವೆಯಾದರೂ ನಮ್ಮ ದೇಶಕ್ಕೆ ಸಲ್ಲಬೇಕು ಎಂದರು.


ಬಪ್ಪಳಿಗೆಯ ಅಂಬಿಕಾ ವಸತಿಯುತ ವಿದ್ಯಾಲಯದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸತ್ಯನಾರಾಯಣ ಶರ್ಮ ಹಾಗೂ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶಿವರಾಮ ಆಳ್ವ ಶುಭಹಾರೈಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ ಉಪಸ್ಥಿತರಿದ್ದರು.

ಹತ್ತನೇ ತರಗತಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನಿಯಾದ ಶ್ರೀಲಕ್ಷ್ಮೀ, ದ್ವಿತೀಯ ಪಿಯುಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನಿಯಾದ ವರುಣ ಎಂ, ಜೆಇಇ ಪ್ರಥಮ ಸ್ಥಾನಿ ಪ್ರಮಿತ್ ರೈ, ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನಿಯಾದ ಅಭಿರಾಮ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಮಾತಾ-ಪಿತರ ಪಾದಪೂಜೆ ನೆರವೇರಿಸಿದರು.

ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ಪ್ರಸ್ತಾವನೆಗೈದರು. ಸನ್ಮಾನಿತರ ಪಟ್ಟಿಯನ್ನು ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ಉಪ ಪ್ರಾಂಶುಪಾಲೆ ಶೈನಿ ಕೆ.ಜೆ ವಾಚಿಸಿದರು. ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು ವಂದಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net