ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಹಾಗೂ ಬೃಹತ್ ಹಿಂದೂ ಚೈತನ್ಯ ಸಮಾವೇಶ

Published on

ವಿಟ್ಲ: ಪುತ್ತಿಲ ಪರಿವಾರ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ವಿಟ್ಲದ ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಗೆ ಪಾದಯಾತ್ರೆ, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಹಾಗೂ ಬೃಹತ್ ಹಿಂದೂ ಚೈತನ್ಯ ಸಮಾವೇಶ ಡಿ.೯ರಂದು ನಡೆಯಲಿದೆ ಎಂದು ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಮರುವಾಳ ಹೇಳಿದರು.

ಹಿಂದೂ ಸಮಾಜದ ಐಕ್ಯತೆಗೆ ಹಾಗೂ ಲೋಕಕಲ್ಯಾಣಾರ್ಥವಾಗಿ ಡಿ.೯ರಂದು ಮಧ್ಯಾಹ್ನ ೨ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಗೆ ಪಾದಯಾತ್ರೆ ಹೊರಡಲಿದೆ. ಕಬಕ ಮಾರ್ಗವಾಗಿ ವಿಟ್ಲ ತಲುಪಿ, ಜೈನ ಬಸದಿಯ ಬಳಿಯಿಂದ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಗಣ್ಯರ ಕೂಡುವಿಕೆಯ ಮೂಲಕ ಪಾದಯಾತ್ರೆ ದೇವಸ್ಥಾನಕ್ಕೆ ಮುಂದುವರೆಯಲಿದೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಮಧ್ಯಾಹ್ನ ೩ಗಂಟೆಯಿಂದ ಭಜನೆ ಆರಂಭಗೊಳ್ಳಲಿದ್ದು, ಸಾಯಂಕಾಲ ೪ಗಂಟೆಯಿಂದ ಉದಯೇಶ ಕೆದಿಲಾಯ ವಿಟ್ಲ ಪೌರೋಹಿತ್ಯದಲ್ಲಿ ಶ್ರೀ ಶನೈಶ್ಚರ ಪೂಜೆ ಪ್ರಾರಂಭಗೊಳ್ಳಲಿದೆ. ರಾತ್ರಿ ಪೂಜೆಯ ಪೂರ್ಣಾಹುತಿ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ ೮ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ’ಭಕ್ತಿಭಾವ ಸಂಗಮ’ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಾಯಂಕಾಲ ೬ಗಂಟೆಗೆ ನಡೆಯುವ ಹಿಂದೂ ಚೈತನ್ಯ ಸಮಾವೇಶವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ವಿಟ್ಲ ಅಧ್ಯಕ್ಷ ನ್ಯಾಯವಾದಿ ಶ್ರೀಕೃಷ್ಣ ಕೇಪು ವಹಿಸಲಿದ್ದಾರೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಮಹಾಬಲೇಶ್ವರ ಸ್ವಾಮೀಜಿ, ವಿಟ್ಲ ಯೋಗೀಶ್ವರ ಮಠದ ಶ್ರೀ ರಾಜ್ ಗುರು ಯೋಗು ಶ್ರದ್ಧಾನಾಥಜೀ, ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ ಆಶೀರ್ವಚನ ನೀಡಲಿದ್ದಾರೆ. ಉಳಿದಂತೆ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಅವರು ತಿಳಿಸಿದರು.

ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ವಿಟ್ಲ ಅಧ್ಯಕ್ಷ ಶ್ರೀಕೃಷ್ಣ ಕೇಪು, ಸಂಚಾಲಕ ಸದಾಶಿವ ಅಳಿಕೆ, ಗೌರವಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಸೇರಾಜೆ, ಕೋಶಾಧಿಕಾರಿ ಮೋಹನ್ ಸೇರಾಜೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net