

ಮೂಡುಬಿದಿರೆ: 800 ವರ್ಷಗಳ ಇತಿಹಾಸವಿರುವ ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಸೋಮನಾಥೇಶ್ವರ ದೇವಸ್ಥಾನವನ್ನು 15 ಕೋಟಿ ರೂ.ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಪುನಃ ನಿರ್ಮಿಸಿದ್ದು, ಫೆ.28ರಿಂದ ಮಾ.7ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಆನುವಂಶೀಯ ಆಡಳಿತ ಮೊಕ್ತೇಸರ ಕುಲದೀಪ ಎಂ.ತಿಳಿಸಿದರು.
28ರಂದು ಮೂಡುಬಿದಿರೆ ಅರಮನೆ ಬಾಗಿಲಿನಿಂದ ಶ್ರೀ ಕ್ಷೇತ್ರದವರೆಗೆ ಬೃಹತ್ ಹೊರಕಾಣಿಕೆ ಮೆರವಣಿಗೆ. ಇದರೊಂದಿಗೆ ಸ್ವರ್ಣ ಶಿರೋಕಲಶ, ದೈವದ ಮಂಚವನ್ನು ಬರಮಾಡಿಕೊಳ್ಳಲಾಗುವುದು. ಮಾ.2 ರಂದು ಶಿಖರ ಪ್ರತಿಷ್ಠಾಪನೆ, ಸೋಮನಾಥೇಶ್ವರ ದೇವರ ಲಿಂಗ ಪ್ರತಿಷ್ಠಾಪನೆ, ಮಾ.6ರಂದು ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ದೇವಳದ ಜೀರ್ಣೋದ್ಧಾರ ಕೆಲಸಗಳು ಅಂತಿಮ ಹಂತದಲ್ಲಿದೆ. ಶಿಲಾಮಯ ಸೋಮನಾಥೇಶ್ವರ, ಹಾಗೂ ಮಹಿಷಮರ್ದಿನಿ, ಗಣಪತಿ ಗುಡಿಗಳನ್ನು ನಿರ್ಮಿಸಲಾಗಿದೆ. ಕ್ಷೇತ್ರಕ್ಕೆ ಎರಡು ಮುಖ್ಯ ಪ್ರವೇಶ ದ್ವಾರ, ದಕ್ಷಿಣ ಮತ್ತು ಉತ್ತರಕ್ಕೆ ಪ್ರತ್ಯೇಕ ಬಾಗಿಲುಗಳನ್ನು ನಿರ್ಮಿಸಲಾಗಿದೆ. ಶಿಲಾ ಶಿಲ್ಪದ ಕೆಲಸವನ್ನು ಎಲ್ಲೂರು ವಿಷ್ಣುಮೂರ್ತಿ ಭಟ್ ಮತ್ತು ಕಾಷ್ಠಶಿಲ್ಪದ ಕೆಲಸವನ್ನು ಕಲ್ಲಮುಂಡ್ಕೂರು ನಾರಾಯಣ ಆಚಾರ್ಯ, ಹರೀಶ್ ಆಚಾರ್ಯ ನಿರ್ವಹಿಸಿದ್ದಾರೆ. ಸಪರಿವಾರ ಸಹಿತ ಪಂಚಧೂಮಾವತಿ ದೈವದ ಪ್ರತಿಷ್ಠಾಪನಾ ಕಾರ್ಯ ನೆರವೇರಿದೆ.
ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸುಮಾರು 1 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು 15 ಎಕರೆ ಪ್ರದೇಶದಲ್ಲಿ ಎರಡು ಸಾವಿರ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಸಂಪಿಗೆಯಲ್ಲಿ ನೂತನವಾಗಿ ನಿರ್ಮಿಸಿದ ಸ್ವಾಗತ ಗೋಪುರದ ಉದ್ಘಾಟನೆ ನಡೆಯಲಿದೆ. ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ತಿರುಮಲರಾಯ ಚೌಟ ವೇದಿಕೆ, ಚೌಟ ರಾಣಿ ಅಬ್ಬಕ್ಕದೇವಿ ವೇದಿಕೆ, ಅಡಿಗಳ್ ಶ್ರೀನಿವಾಸ ಭಟ್ ವೇದಿಕೆ ನಿರ್ಮಿಸಿದ್ದು, ಈ ವೇದಿಕೆಗಳಲ್ಲಿ ಎಲ್ಲ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಕುಂಗೂರು ಚಾವಡಿಮನೆ ಶಿವಪ್ರಸಾದ್ ಆಚಾರ್, ಜತೆ ಕಾರ್ಯದರ್ಶಿ ಕೆ.ಶ್ರೀಪತಿ ಭಟ್, ವಿದ್ಯಾ ರಮೇಶ ಭಟ್, ವಾದಿರಾಜ ಮಡ್ಮಣ್ಣಾಯ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನೀಲೇಶ್ ಶೆಟ್ಟಿ, ಉಪಾಧ್ಯಕ್ಷ ಬಾಹುಬಲಿ ಪ್ರಸಾದ್ ಗೋಷ್ಠಿಯಲ್ಲಿದ್ದರು.