ಜಾತಿ, ಧರ್ಮ ಮೀರಿ ಭಗವದ್ಗೀತೆ ಪಸರಿಸುವ ಕೆಲಸವಾಗಲಿ

1111
Published on


ಕುಶಾಲನಗರ : ಜಾತಿ ಮತ್ತು ಧರ್ಮವನ್ನು ಮೀರಿ ಭಗವದ್ಗೀತೆಯನ್ನು ಪಸರಿಸಿದಲ್ಲಿ ಶ್ರೀಕೃಷ್ಣನ ಅನುಗ್ರಹ ದೊರೆಯುತ್ತದೆ ಎಂದು ಉಡುಪಿಯ ಪುತ್ತಿಗೆ ಮಠದ ಶ್ರೀ ಡಾ.ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು.
ಕೊಡಗು ಜಿಲ್ಲೆಯ ಭಗವದ್ಗೀತೆ ಕೋಟಿ ಲೇಖನ ಯಜ್ಞ ಸಮಿತಿ ಸಹಯೋಗದಲ್ಲಿ ಇಲ್ಲಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಸ್ಥಾನ ಪೂಜೆ, ತೊಟ್ಟಿಲು ಸೇವೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಭಗವದ್ಗೀತೆಯ ಸಂದೇಶ ಸಾರುವ ಬೃಹತ್ ಕಾರ್ಯಕ್ರಮಕ್ಕೆ ಸಿಂಗಾಪುರದಿಂದ ಆಹ್ವಾನ ಬಂದಿತ್ತು. ಆಶ್ಚರ್ಯದಿಂದ ಅಲ್ಲಿನ ಆಯೋಜಕರನ್ನು ಕೇಳಿದಾಗ, ಭಗವದ್ಗೀತೆ ಹಿಂದುಗಳ ಗ್ರಂಥವಲ್ಲ. ಅದು ವಿಶ್ವಕ್ಕೆ ಜಾತ್ಯತೀತ ಸಂದೇಶ ಸಾರುವ ಶ್ರೇಷ್ಠಗ್ರಂಥ. ಅದನ್ನು ಕೇಳಿಸಿಕೊಂಡರೆ ಸಾಕು ಮನಸ್ಸು ಮತ್ತು ದೇಹಕ್ಕೆ ಉಲ್ಲಾಸ ದೊರೆಯುತ್ತದೆ ಎಂಬ ಉತ್ತರ ಬಂತು ಎಂದರು.
ವಿಶ್ವ ಗೀತ ಪರ್ಯಾಯ ಎನ್ನುವ ಹೆಸರಿನಲ್ಲಿ ಜ.18ರಂದು 4ನೇ ಐತಿಹಾಸಿಕ ಪರ್ಯಾಯ ಕಾರ್ಯಕ್ರಮ ನಡೆಯಲಿದೆ. 2ನೇ ಪರ್ಯಾಯದಲ್ಲಿ ಒಂದು ಲಕ್ಷ ಗೀತ ಲೇಖನ ಪುಸ್ತಕಗಳೊಂದಿಗೆ ಗೀತ ಮಂದಿರ ನಿರ್ಮಿಸಿದ್ದೇವೆ. ಈ ಬಾರಿ ಶ್ರೀಕೃಷ್ಣನಿಗೆ ಚಿನ್ನದ ರಥ ಸಮರ್ಪಿಸುವ ಚಿಂತನೆಯಿದೆ ಎಂದು ತಿಳಿಸಿದರು.
ಭಗವದ್ಗೀತೆ ಕೋಟಿ ಲೇಖನ ಯಜ್ಞ ಸಮಿತಿಯ ಕೊಡಗು ಜಿಲ್ಲಾಧ್ಯಕ್ಷ ಎಸ್.ಕೆ.ಸತೀಶ್, ಸದಸ್ಯರಾದ ಜನಾರ್ದನ, ಕೆ.ಎನ್. ದೇವರಾಜ್, ಸುಬ್ರಹ್ಮಣ್ಯ, ಎಚ್.ಡಿ.ಚಂದ್ರು, ಕೆ.ಜೆ.ರಮೇಶ್, ದೇವಾಂಗ ಸಮಾಜದ ಅಧ್ಯಕ್ಷ ಡಿ.ವಿ.ರಾಜೇಶ್, ಗಣಪತಿ ದೇವಾಲಯದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net