

2014ರಲ್ಲಿ ಸ್ವಾಗತ ಗೋಪುರ ಉದ್ಘಾಟನೆ
ವಿಜಯವಾಣಿ ಸುದ್ದಿಜಾಲ ಉಡುಪಿ
ವ್ಯಕ್ತಿಯಲ್ಲಿ ಆದರ್ಶಗಳು ನೆಲೆಸಿದರೆ ಮಾತ್ರ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆದರ್ಶಮಯ ಜೀವನ ನಡೆಸಿದ್ದ ಹಾಗೂ ದೇಶ ಮೊದಲು ಎಂಬ ತತ್ವ ಹೊಂದಿದ್ದ ಅನರ್ಘ್ಯ ರತ್ನ ರತನ್ ಟಾಟಾ ನಿಧನ ಸುದ್ದಿ ಮನಸ್ಸಿಗೆ ನೋವು ತಂದಿದೆ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸರಳ ವ್ಯಕ್ತಿತ್ವದ ಅವರು ನಮ್ಮ ಪುತ್ತಿಗೆ ಮೂಲ ಮಠಕ್ಕೆ 2014ರ ಫೆಬ್ರವರಿ 2ರಂದು ಆಗಮಿಸಿ ದೇವರ ದರ್ಶನ ಪಡೆದಿದ್ದರು. ಭಗವದ್ಗೀತೆ ಕುರಿತು ಅವರು ಪ್ರಕಟಿಸಿದ್ದ ಆದರ ಇನ್ನೂ ನಮ್ಮ ಮನಸ್ಸಿನಲ್ಲಿ ಹಸಿರಾಗಿದೆ. ನಮ್ಮ ಆಹ್ವಾನದ ಮೇರೆಗೆ ಪುತ್ತಿಗೆ ವಿದ್ಯಾಪೀಠಕ್ಕೆ ಭೇಟಿಕೊಟ್ಟು, ಶ್ರೀ ನರಸಿಂಹ ಹಾಗೂ ಗಣಪತಿ ದೇವರ ದರ್ಶನ ಪಡೆದಿದ್ದರು. ಅಲ್ಲದೆ, ಸ್ವಾಗತ ಗೋಪುರ ಉದ್ಘಾಟಿಸಿದ್ದರು ಎನ್ನುವುದನ್ನು ಶ್ರೀಗಳು ನೆನಪಿಸಿಕೊಂಡಿದ್ದಾರೆ.
ಉಡುಪಿಯ ಶ್ರೀಕೃಷ್ಣ ಮುಖ್ಯಪ್ರಾಣ ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸಿದ್ದಾಗಿ ಪುತ್ತಿಗೆ ಸುಗುಣೇಂದ್ರ ಶ್ರೀಗಳು ತಿಳಿಸಿದ್ದಾರೆ.