

ವಿಜಯವಾಣಿ ಸುದ್ದಿಜಾಲ ಉಡುಪಿ
ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಉಗ್ರರ ಅಟ್ಟಹಾಸ ಕೇಳಿ ತುಂಬ ವ್ಯಾಕುಲರಾಗಿದ್ದೇವೆ. ಈ ರೀತಿಯ ಪ್ರವೃತ್ತಿ ಮುಂದುವರಿದರೆ ಭಾರತದಲ್ಲಿ ಸನಾತನ ಧರ್ಮದ ಅಸ್ತಿತ್ವ ನಾಶವಾಗುವತ್ತ ಸಾಗುತ್ತಿದೆಯೇ ಎಂಬ ಆತಂಕ ಕಾಡುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಭಯೋತ್ಪಾದನೆಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಆಗ್ರಹಿಸಿದ್ದಾರೆ.
ಕಾಶ್ಮೀರದ ಘಟನೆಯಷ್ಟೇ ಅಲ್ಲದೆ, ಪಶ್ಚಿಮ ಬಂಗಾಲದಲ್ಲಿ ಹಾಗೂ ಕೇರಳದಲ್ಲಿ ನಡೆಯುತ್ತಿರುವ ವಿದ್ಯಮಾನ ಗಮನಿಸಿದಾಗ ಇದರ ಹಿಂದೆ ವ್ಯವಸ್ಥಿತ ಸಂಚು ಇರುವುದು ಕಂಡುಬರುತ್ತದೆ. ಆ ಸಕ್ರಿಯ ಕಾರ್ಯಾಚರಣೆಯನ್ನು ಬೇರು ಸಮೇತ ಕಿತ್ತುಹಾಕಲು ಕೇಂದ್ರ ಸರ್ಕಾರ ಮಾಸ್ಟರ್ ಪ್ಲ್ಯಾನ್ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದುಗಳ ಮೇಲೆ ಉದ್ದೇಶಪೂರ್ವಕವಾಗಿ ಆಕ್ರಮಣ ಮಾಡುವುದು ಬಹಳ ಆತಂಕದ ವಿಚಾರ. ಈವರೆಗೆ ಉಗ್ರಗಾಮಿಗಳು ಕೇವಲ ವಿಧ್ವಂಸಕ ಕೃತ್ಯಕ್ಕಷ್ಟೇ ಆದ್ಯತೆ ನೀಡಿರುವುದು ವಿವಿಧ ಘಟನೆಗಳಿಂದ ತಿಳಿದುಬರುತ್ತದೆ. ಆದರೆ, ಕಾಶ್ಮೀರದ ಈ ಘಟನೆಯಿಂದ ಹಿಂದುಗಳನ್ನೇ ಹತ್ಯೆ ಮಾಡುವ ಉದ್ದೇಶ ಸ್ಪಷ್ಟವಾಗಿದೆ. ಇದನ್ನು ಭಯೋತ್ಪಾದನೆ ಎಂಬ ಹೆಸರಿಗಷ್ಟೇ ಸೀಮಿತ ಮಾಡಬಾರದು. ಇದು ಹಿಂದುತ್ವ ನಾಶ ಪಡಿಸುವ ಪ್ರಬಲ ಷಡ್ಯಂತ್ರ ಎಂದು ಪರಿಗಣಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಕಠಿಣ ನಿಲುವು ತಾಳಬೇಕೆಂದು ಒತ್ತಾಯಿಸುವುದಾಗಿ ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.