ದೇವರ ಸೇವೆಯಲ್ಲಿ ಸಂಕಲ್ಪದಲ್ಲೇ ಫಲ: ಪುತ್ತಿಗೆ ಶ್ರೀ

udp-6-puttige 4
Published on

ಉಡುಪಿ: ಎಲ್ಲಾ ಕಾರ್ಯಗಳಲ್ಲಿ ಅಂತ್ಯದಲ್ಲಿ ಲ ಸಿಗುತ್ತದೆ. ಆದರೆ ದೇವರ ಸೇವೆಯಲ್ಲಿ ಸಂಕಲ್ಪ ಮಾತ್ರದಿಂದಲೇ ಪುಣ್ಯಲ ಪ್ರಾಪ್ತಿಯಾಗುತ್ತದೆ. ಹೀಗಾಗಿ ಕೃಷ್ಣಪೂಜೆಯಲ್ಲಿ ಕೈಜೋಡಿಸುವುದು ಪುಣ್ಯಪ್ರದ ಕಾರ್ಯ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಪುತ್ತಿಗೆ ಮಠದಲ್ಲಿ ಬುಧವಾರ ನಡೆದ ಧಾನ್ಯ ಮುಹೂರ್ತ ಸಭಾ ಕಾರ್ಯಕ್ರಮದಲ್ಲಿ ಅವರು ಅಶೀರ್ವಚನ ನೀಡಿದರು.

ಎಲ್ಲರೂ ದೇವತಾ ಕಾರ್ಯದಲ್ಲೇ ತೊಡಗಿದ್ದರೆ ಜಗತ್ತು ನಡೆಯಲು ಸಾಧ್ಯವಿಲ್ಲ. ಎಲ್ಲರ ಪರವಾಗಿ ಕೆಲವರಿಗೆ ಈ ಅವಕಾಶವನ್ನು ಶಾಸ್ತ್ರಗಳು ಒದಗಿಸಿಕೊಟ್ಟಿವೆ. ಹೀಗಾಗಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ದೇವರ ಪೂಜೆ ಮಾಡುವವರಿಗೆ ಸಮಾಜದಲ್ಲಿ ವಿಶೇಷ ಗೌರವ ಎಂದು ಹೇಳಿದರು.

ವಿಶ್ವಗಿತಾ ಪರ್ಯಾಯ

ಕೇವಲ ಬಾಹ್ಯ ಆಚರಣೆಗಳಲ್ಲದೆ ಆಂತರ್ಯದಲ್ಲಿಯೂ ದೇವರ ಚಿಂತನೆ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಕೋಟಿ ಗೀತಾ ಲೇಖನ ಯಜ್ಞ ಅಭಿಯಾಣ ಹಮ್ಮಿಕೊಳ್ಳಲಾಗಿದ್ದು, 1 ಕೋಟಿ ಜನರಿಂದ ಭಗವದ್ಗೀತೆ ಬರೆಸುವ ಸಂಕಲ್ಪ ನಮ್ಮದಾಗಿದೆ. ಅದನ್ನು ಪೂರ್ಣಗೊಳಿಸುವುದು ದೇವರ ಜವಾಬ್ದಾರಿ. ಸುಮಾರು 1 ಲಕ್ಷ ಜನರಿಗೆ ಪರ್ಯಾಯ ಆಮಂತ್ರಣ ಪತ್ರಿಕೆ ನೀಡಲಾಗುತ್ತಿದ್ದು, ಉಳಿದೆಡೆಯ ಜನರಿಗೆ ಕೃಷ್ಣನ ಸೇವೆ ಮಾಡುವ ಅವಕಾಶವಿದ್ದರೆ ಉಡುಪಿ ಜನರಿಗೆ ಕೃಷ್ಣ ಮತ್ತು ಭಕ್ತರ ಸೇವೆ ಮಾಡುವ ವಿಶೇಷ ಸುಯೋಗ ಲಭಿಸಿದೆ. ಇದನ್ನು ಗರಿಷ್ಠವಾಗಿ ಉಪಯೋಗಿಸಿಕೊಳ್ಳಬೇಕು. ಈ ಮೂಲಕ ಮಾದರಿ ಪರ್ಯಾಯ ನಡೆಯಬೇಕು ಎಂದು ಆಶಿಸಿದರು.

ಪರ್ಯಾಯ ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ವಿದೇಶಗಳಲ್ಲಿಯೂ ಕೃಷ್ಣ ಆರಾಧನೆಯಲ್ಲಿ ತೊಡಗಿರುವ ಪುತ್ತಿಗೆ ಶ್ರೀಗಳ ಪರ್ಯಾಯಕ್ಕೆ ವಿಶೇಷ ಮಹತ್ವವಿದ್ದು, ವಿಶ್ವದಲ್ಲಿ ಭಾರತೀಯ ಸಂಸತಿ ಮತ್ತು ಸಂಸ್ಕಾರವನ್ನು ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಅನ್ನಬ್ರಹ್ಮ ಎಂದೆಣಿಸಿರುವ ಉಡುಪಿ ಕೃಷ್ಣನಿಗೆ ಸಲ್ಲಿಕೆಯಾಗುವ ವಿಶೇಷ ಹೊರೆಕಾಣಿಕೆ ಉಡುಪಿಯಲ್ಲಿ ಮಾತ್ರ ನೋಡಲು ಸಾಧ್ಯ. ಹೀಗಾಗಿ ಸಾರ್ವಜನಿಕರು ಹೆಚ್ಚು ಕಾಲ ಬಾಳಿಕೆ ಬರುವ ವಸ್ತುಗಳನ್ನೇ ಹೊರೆಕಾಣಿಕೆಯಲ್ಲಿ ಸಮರ್ಪಿಸಬೇಕು. ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು ಪರ್ಯಾಯದ ಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದು, ಮುಂದಿನ 2 ವರ್ಷ ಸಮೃದ್ಧಿಯ ವರ್ಷವಾಗಬೇಕು ಎಂದು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ರುಪತಿ ಭಟ್​, ಮಂಗಳೂರಿನಲ್ಲಿ ಜ.6ಕ್ಕೆ ಪೌರಸನ್ಮಾನ ನಡೆಯಲಿದೆ. ಜ.8ಕ್ಕೆ ಕನ್ನರ್ಪಾಡಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪರ್ಯಾಯ ಮಠದ ಉಭಯ ಶ್ರೀಗಳು ಜೋಡುಕಟ್ಟೆಯಿಂದ ಮೆರವಣಿಗೆ ಮೂಲಕ ಪುರಪ್ರವೇಶ ಮಾಡಲಿದ್ದಾರೆ. ಈ ಬಾರಿ ಪರ್ಯಾಯದಲ್ಲಿ ನಗರಾಲಂಕಾರಕ್ಕೆ ವಿಶೇಷ ಅದ್ಯತೆ ನೀಡುತ್ತಿದ್ದು, ವಿದೇಶಗಳಿಂದಲೂ ಅತಿಥಿಗಳು ಉಡುಪಿಗೆ ಆಗಮಿಸುವುದರಿಂದ ನಗರದ ಜನತೆ ತಾವೇ ಅತಿಥಿಗಳನ್ನು ಆಯ್ಕೆ ಮಾಡಿಕೊಂಡು ಮನೆಯಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಬೇಕು ಎಂದರು.

ಸ್ವಾಗತ ಸಮಿತಿ ಅಧ್ಯಕ್ಷ ಡಾ. ಎಚ್​.ಎಸ. ಬಲ್ಲಾಳ್​, ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್​ ಶೆಟ್ಟಿ, ಕುಂಭಾಶಿ ದೇವಸ್ಥಾನದ ಸೂರ್ಯನಾರಾಯಣ ಉಪಾಧ್ಯಾಯ, ಶ್ರೀರಮಣ ಉಪಾಧ್ಯಾಯ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ನಗರಸಭೆ ಪೌರಾಯುಕ್ತ ರಾಯಪ್ಪ, ಕರ್ಣಾಟಕ ಬ್ಯಾಂಕ್​ ನಿರ್ದೇಶಕ ಬಾಲಕೃಷ್ಣ ಅಲ್ಸೆ, ಉದ್ಯಮಿಗಳಾದ ಪ್ರಸಾದ್​ರಾಜ್​ ಕಾಂಚನ್​, ಪುರುಷೋತ್ತಮ ಶೆಟ್ಟಿ, ಭುವನೇಂದ್ರ ಕಿದಿಯೂರು, ಶ್ರೀಗಳ ಆಪ್ತ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು. ಮಠದ ದಿವಾನ್​ ನಾಗರಾಜ ಅಚಾರ್ಯ ಸ್ವಾಗತಿಸಿ, ರಮೇಶ್​ ಭಟ್​ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net