

ಉಡುಪಿ: ನಮ್ಮ ಚತುರ್ಥ ಪರ್ಯಾಯದ ಆರೋಭೋತ್ಸವದ ನಿಮಿತ್ತ ಪ್ರತಿದಿನ ಸನ್ಮಾನ, ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಸಾಧಕರನ್ನು ಸನ್ಮಾನಿಸಿದ್ದೇವೆ. ವಿವಿಧ ಸಾಂಸತಿಕ ಕಾರ್ಯಕ್ರಮ ಆಯೋಜಿಸಿ ಕಲಾವಿದರಿಗೆ ವೇದಿಕೆ ಒದಗಿಸಿದ್ದೇವೆ. ಎಲ್ಲ ಸಾಧಕರ ಹಿಂದೆ, ಕಲಾವಿದರ ಹಿಂದೆ ಶ್ರೀಕೃಷ್ಣ ಸದಾ ಬೆಂಗಾವಲಾಗಿ ನಿಂತಿರುತ್ತಾನೆ. ಆತನ ವಿಶೇಷವಾದ ಅನುಗ್ರಹ ಇರುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಯುಪಿಸಿಎಲ್ ಮುಖ್ಯಸ್ಥ ಕಿಶೋರ್ ಆಳ್ವ ಹಾಗೂ ಉದ್ಯಮಿ ಪ್ರಸಾದರಾಜ್ ಕಾಂಚನ್ ಅವರಿಗೆ "ಶ್ರೀಕೃಷ್ಣಾನುಗ್ರಹ' ಪ್ರಶಸ್ತಿ ನೀಡಿ ಆಶೀರ್ವಚನ ನೀಡಿದರು.
ಅಯೋಧ್ಯೆಯ ಆನಂದ
ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿ, ಹಲವಾರು ಪರಂಪರೆಗೆ ಸೇರಿದ ದೇಶ ಭಾರತವಾಗಿದೆ. ಆದರೂ ಪರಕೀಯರ ದಾಳಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ? ಪರಕೀಯರೇಕೆ ನಮ್ಮ ದೇವಸ್ಥಾನಗಳ ಮೇಲೆ ದಾಳಿ ಮಾಡಿದರು? ಕೇವಲ ಸಂಪತ್ತಿನ ಆಸೆಗೆ ಅಥವಾ ಕೇವಲ ರಾಜ್ಯ ಆಳಲು ಅಥವಾ ಸಾಮ್ರಾಜ್ಯ ವಿಸ್ತರಿಸಲು ಬಂದಿಲ್ಲ. ತಮ್ಮ ಮತದ ಮತಾಂಧತೆಯನ್ನು ಕ್ರೌರ್ಯದ ಮೂಲಕ ವಿಸ್ತರಿಸಲು ಬಂದಿದ್ದರು. ಅದರ ಪರಿಣಾಮವೇ ಹಿಂದು ದೇವಾಲಯಗಳ ಆಕ್ರಮಣ ಆಗಿದೆ. ಇದನ್ನೆಲ್ಲ ಮರೆಸಿದ ಜ.22ರ ದಿನ ಸಮಸ್ತ ಭಾರತವಷ್ಟೇ ಅಲ್ಲದೆ ವಿಶ್ವಕ್ಕೆ ಅಯೋಧ್ಯೆಯ ಆನಂದ ನೀಡಿದ ದಿನ ಎಂದು ಬಣ್ಣಿಸಿದರು.
ಮಾಜಿ ಶಾಸಕ ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ಕುಮಾರ್ ಕುಂದಾಪುರ, ಉಡುಪಿಯ ಉದ್ಯಮಿಗಳಾದ ಉದಯಕುಮಾರ್ ಶೆಟ್ಟಿ, ಸುರೇಶ್ ನಾಯಕ್, ಹೆರ್ಗ ದಿನಕರ ಶೆಟ್ಟಿ, ಮಹೇಶ್ ಶೆಟ್ಟಿ, ಫೆಡರಲ್ ಬ್ಯಾಂಕ್ನ ಉಪಾಧ್ಯಕ್ಷ ರಾಜೀವ್ ಬಿ.ಸಿ., ಉದ್ಯಮಿ ವೀರೇಂದ್ರ ಹೆಗ್ಗಡೆ, ಆಕ್ಸಿಸಸ ಬ್ಯಾಂಕ್ನ ಶಾಖಾ ಮುಖ್ಯಸ್ಥೆ ದೀಪಶ್ರೀ, ಯೂನಿಯನ್ ಬ್ಯಾಂಕ್ನ ವಿಭಾಗೀಯ ಮುಖ್ಯಸ್ಥ ನರೇಶ್ಕುಮಾರ್, ರೋಬೋ ಸಾಫ್ಟ್ವೇರ್ ಸಂಸ್ಥೆಯ ಆರ್ಥಿಕ ವಿಭಾಗದ ಮುಖ್ಯಸ್ಥ ಕೃಷ್ಣರಾಜ ರಾವ್ ಉಪಸ್ಥಿತರಿದ್ದರು. ಗೋಪಾಲ ಆಚಾರ್ಯ ನಿರೂಪಿಸಿದರು. ಕಾರ್ಯಕ್ರಮಗಳ ಮೇಲುಸ್ತುವಾರಿ ರಮೇಶ್ ಭಟ್ ಇದ್ದರು.