

ಉಡುಪಿ : ಭಗವಂತ ಶ್ರೀಕೃಷ್ಣ ವ್ಯಕ್ತಿಯ ಪರ ಅಲ್ಲ. ತತ್ವದ ಪರ ಮತ್ತು ಸಜ್ಜನರ ಪಕ್ಷಪಾತಿ. ಹೀಗಾಗಿ ಭಗವದ್ಗೀತೆ ಯಾವುದೇ ಮತೀಯ ಗ್ರಂಥವಲ್ಲ. ಸನ್ಮತಿ ನೀಡುವ ಗ್ರಂಥ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಸೋಮವಾರ ರಥಬೀದಿಯ ಪುತ್ತಿಗೆ ಮಠದಲ್ಲಿ ಕೋಟಿ ಗೀತಾ ಲೇಖನ ಅಂಗವಾಗಿ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಭಗವದ್ಗೀತೆಯ ಪರಿಜ್ಞಾನ ಹೊಂದುವುದು ಅಗತ್ಯ. ಜಗತ್ತಿನ ಎಲ್ಲಾ ಸಮಸ್ಯೆಗಳ ಮೂಲ ಅಹಂಕಾರ ಮತ್ತು ಮಮಕಾರ. ಎಲ್ಲವೂ ಭಗವಂತನ ಅಧೀನ ಎಂದು ತಿಳಿದರೆ ಮನುಷ್ಯನಿಗೆ ಅಹಂಕಾರ ಬರಲು ಸಾಧ್ಯವಿಲ್ಲ. ಹೀಗಾಗಿ ಬಾಹ್ಯ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಗೀತೆಯಲ್ಲಿ ಪರಿಹಾರವಿದೆ ಎಂದು ಹೇಳಿದರು.
ಪರ್ಯಾಯ ಪಂಚ ಯೋಜನೆ
ಮುಂದಿನ ಪುತ್ತಿಗೆ ಮಠದ ಪರ್ಯಾಯದಲ್ಲಿ ಪಂಚ ಪ್ರಧಾನ ಯೋಜನೆಗಳನ್ನು ಪುತ್ತಿಗೆ ಶ್ರೀಗಳು ಪ್ರಕಟಿಸಿದರು.
1. ಕೋಟಿ ಜನರಿಂದ ಭಗವದ್ಗೀತೆ ಬರೆಸುವುದು
2. ಅಂತರಾಷ್ಟ್ರೀಯ ಭಗವದ್ಗೀತೆ ಸಮ್ಮೇಳನ
3. ಭಗವದ್ಗೀತೆ ಯಾಗ
4. ಅಖಂಡ ಗೀತಾ ಪಾರಾಯಣ
5. ಕಲ್ಸಂಕದಲ್ಲಿ ಕೃಷ್ಣ ಮಠಕ್ಕೆ ಬರುವಲ್ಲಿ ಭವ್ಯ ಸ್ವಾಗತ ಗೋಪುರ ಹಾಗೂ ಮಧ್ವಾಚಾರ್ಯರ ಪ್ರತಿಮೆ ಸ್ಥಾಪನೆ
ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಮುಖಂಡರಾದ ಪ್ರಮೋದ್ ಮಧ್ವರಾಜ್, ಯಶ್ಪಾಲ್ ಸುವರ್ಣ, ಬೆಳಪು ದೇವಿಪ್ರಸಾದ್ ಶೆಟ್ಟಿ, ಯೋಗೀಶ್ ಶೆಟ್ಟಿ, ಪ್ರವೀಣ್ ಶೆಟ್ಟಿ ಕಪ್ಪೆಟ್ಟು ಉಪಸ್ಥಿತರಿದ್ದರು.