ಪರ್ಯಾಯ ಕೃಷ್ಣಸೇವೆಯ ಸುವರ್ಣಾವಕಾಶ: ಪುತ್ತಿಗೆ ಶ್ರೀ

udp-25-akki 5
Published on

ಉಡುಪಿ: ಪರ್ಯಾಯ ಕೃಷ್ಣನ ಸೇವೆಯ ಸುವರ್ಣಾವಕಾಶ. ಭಗವಂತ ಬಯಸಿದರೆ ಮಾತ್ರ ಸಿಗುವ ಸುಯೋಗ. ಇದರ ಫಲ ಎಲ್ಲಾ ಭಕ್ತರು ಪಡೆಯುವಂತಾಗಲಿ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.

ಗುರುವಾರ ಪುತ್ತಿಗೆ ಮಠದಲ್ಲಿ ಚತುರ್ಥ ಕೃಷ್ಣಪೂಜಾ ಪರ್ಯಾಯದ ಪೂರ್ವಭಾವಿ ದ್ವಿತೀಯ ಅಕ್ಕಿ ಮುಹೂರ್ತ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಉಡುಪಿ ಕೃಷ್ಣ ಅನ್ನಬ್ರಹ್ಮ. ಹೀಗಾಗಿ ಅನ್ನದಾನಕ್ಕೆ ವಿಶೇಷ ಮಹತ್ವವಿದೆ. ಕಳೆದ 800 ವರ್ಷಗಳಿಂದಲೂ ಪ್ರತೀ ನಿತ್ಯ ಅನ್ನದಾನ ನಡೆಯುವ ಏಕೈಕ ಕ್ಷೇತ್ರ ಉಡುಪಿ. ಅನ್ನದಾನವೇ ಪರ್ಯಾಯದ ಮುಖ್ಯ ಉದ್ದೇಶ. 4 ಮುಹೂರ್ತಗಳು ಇದಕ್ಕೆ ಪೂರಕ. ಈ ಬಾರಿ ಅಕ್ಕಿ ಮುಹೂರ್ತಕ್ಕೆ ಅಂಗಡಿಯಿಂದ ತಂದು ಅಕ್ಕಿ ಮುಡಿ ಕಟ್ಟಿಲ್ಲ. ವಿವಿಧ ಸಂಘ ಸಂಸ್ಥೆಗಳೇ ಅಕ್ಕಿ ಮುಡಿ ನೀಡಿರುವುದು ವಿಶೇಷ ಎಂದರು.

ದಾನ ಮಾಡುವುದಕ್ಕೋಸ್ಕರ ಅಡುಗೆ ಮಾಡಬೇಕು. ಇದರಿಂದ ಜನ್ಮ ಜನ್ಮಾಂತರದಲ್ಲಿ ಮೃಷ್ಟಾನ್ನ ಪ್ರಾಪ್ತಿಯಾಗುತ್ತದೆ. ಈ ಜನ್ಮದಲ್ಲಿ ದಾನ ಮಾಡದವರು ಮುಂದಿನ ಜನ್ಮದಲ್ಲಿ ಭಿಕ್ಷುಕರಾಗುತ್ತಾರೆ. ದಾನದಿಂದ ಜಗತ್ತು ನಡೆಯುತ್ತದೆ. ಹೀಗಾಗಿ ದಾನ ಬಹಳ ಮುಖ್ಯವಾಗಿದ್ದು, ಇದರಿಂದ ಬಡತನ ನಿವಾರಣೆಯೂ ಸಾಧ್ಯವಿದೆ ಎಂದರು.

ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಉಭಯ ಶ್ರೀಪಾದರು ಗೀತಾ ಅಕ್ಕಿಮುಡಿ ಪುಸ್ತಕ ಹಾಗೂ ಮಠದ ನೂತನ ಅಂತರ್ಜಾಲ ತಾಣ ಬಿಡುಗಡೆ ಮಾಡಿದರು.

ಶಾಸಕರಾದ ಯಶ್‌ಪಾಲ್ ಸುವರ್ಣ, ಗರ್ಮೆ ಸುರೇಶ್ ಶೆಟ್ಟಿ,  ಕಟೀಲು ದೇವಳದ ಆಸ್ರಣ್ಣ ಸಹೋದರರು, ವಿದ್ವಾನ್ ಪಂಜ ಭಾಸ್ಕರ ಭಟ್, ಸಗ್ರಿ ವೇದವ್ಯಾಸ ಉಪಾಧ್ಯಾಯ, ಶಾರದಾ ವಿದ್ಯಾಲಯ ಮುಖ್ಯಸ್ಥ ಡಾ. ಎಂ.ಬಿ. ಪುರಾಣಿಕ್, ದ.ಕ. ಕಸಾಪ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ,  ಆನೆಗುಡ್ಡೆ ಕುಂಭಾಶಿ ಕ್ಷೇತ್ರದ ಸೂರ್ಯನಾರಾಯಣ ಉಪಾಧ್ಯಾಯ, ಬಿಜೆಪಿ ಮುಖಂಡ ಬ್ರಿಜೇಶ್ ಚೌಟ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ,  ಮೊದಲಾದವರಿದ್ದರು.
 ಪುತ್ತಿಗೆ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಸ್ವಾಗತಿಸಿ, ವಿದ್ವಾನ್ ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು. ವಿದ್ವಾನ್ ಮಹಿತೋಷ್ ಆಚಾರ್ಯ ವಂದಿಸಿದರು.

ಪುತ್ತಿಗೆ ಮಠ ಅಕ್ಕಿ ಮುಹೂರ್ತ ಸಂಪನ್ನ
ಪುತ್ತಿಗೆ ಮಠದ ಪರ್ಯಾಯ ಪೂರ್ವಭಾವಿ 2ನೇ ಅಕ್ಕಿ ಮುಹೂರ್ತ ಗುರುವಾರ 8.45ಕ್ಕೆ ಮಿಥುನಲಗ್ನದಲ್ಲಿ ರಥಬೀದಿಯ ಮಠದಲ್ಲಿ ನಡೆಯಿತು.
ಬೆಳಗ್ಗೆ  ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ  ಮಠದ ಪಟ್ಟದದೇವರಾದ ವಿಠಲ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ನವಗ್ರಹ ಪೂಜೆ ಸಲ್ಲಿಸಿದ ಬಳಿಕ ಚಿನ್ನದ ಪಲ್ಲಕಿಯಲ್ಲಿ ಅಕ್ಕಿ ಮುಡಿಯನ್ನಿಟ್ಟು ಮೆರವಣಿಗೆ ಮೂಲಕ ತೆರಳಿ ಚಂದ್ರೇಶ್ವರ, ಅನಂತೇಶ್ವರ ದೇವಸ್ಥಾನ, ಆಚಾರ್ಯ ಮಧ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲಾಯಿತು. ಕೃಷ್ಣ ಮಠದಲ್ಲಿ ಕೃಷ್ಣ, ಮುಖ್ಯಪ್ರಾಣ ಗರುಡ ಸುಬ್ರಹ್ಮಣ್ಯ ವಾದಿರಾಜ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮರಳಿ ಪುತ್ತಿಗೆ ಮಠಕ್ಕೆ ಆಗಮಿಸಿದ 108 ಅಕ್ಕಿ ಮುಡಿಗಳನ್ನು ದೇವರ ಎದುರಿನಲ್ಲಿಟ್ಟು ಮಂಗಳಾರತಿ ಸಲ್ಲಿಸಲಾಯಿತು. ಹೆರ್ಗ ವೇದವ್ಯಾಸ ಭಟ್ ಧಾರ್ಮಿಕ ವಿಧಿ ವಿಧಾನ ನೇತೃತ್ವ ವಹಿಸಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net