

ಉಡುಪಿ: ಪುತ್ತಿಗೆ ಪರ್ಯಾಯ ಹಿನ್ನೆಲೆಯಲ್ಲಿ ಜ. 14ರಂದು ವೈಭವದ ಮೆರವಣಿಗೆ ಮೂಲಕ ಹೊರೆ ಕಾಣಿಕೆ ಸಮರ್ಪಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ 500ಕ್ಕೂ ಅಧಿಕ ವಾಹನಗಳು, 25,000ಕ್ಕೂ ಅಧಿಕ ಸಹಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಗುರುವಾರ ರಥಬೀದಿಯಲ್ಲಿರುವ ಪುತ್ತಿಗೆ ಮಠದ ಸಭಾಂಗಣದಲ್ಲಿ ನಡೆದ ಸಹಕಾರಿ ಸಂಘ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ನವೋದಯ ಸ್ವಸಹಾಯ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು ಭಜನಾ ತಂಡವೂ ಪಾಲ್ಗೊಳ್ಳಲಿದೆ. ಜ. 8ರ ಪುರಪ್ರವೇಶಕ್ಕೆ ಮೊದಲು ಪುತ್ತಿಗೆ ಮಠದ ಯತಿ ಪರಂಪರೆಯ ಕಮಾನನ್ನು ಜೋಡುಕಟ್ಟೆಯಿಂದ ರಥಬೀದಿ ತನಕ ಅಳವಡಿಸಲಾಗುವುದು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ ಹಾಗೂ ಪುತ್ತಿಗೆ ಪರ್ಯಾಯ ಹೊರೆ ಕಾಣಿಕೆ ಸಮಿತಿ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ , ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಮಾತನಾಡಿದರು. ಕೋಟ ಸಿ. ಎ. ಬ್ಯಾಂಕಿನ ಅಧ್ಯಕ್ಷ ಅಶೋಕ್ ಪೂಜಾರಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು, ವೈ. ಸುಧೀರ್ ಕುಮಾರ್ ಪಡುಬಿದ್ರಿ, ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಮನೋಜ್ ಕರ್ಕೇರ ಉಪಸ್ಥಿತರಿದ್ದರು. ರಮೇಶ್ ಭಟ್ ಸ್ವಾಗತಿಸಿ, ನಿರೂಪಿಸಿದರು.