ಸಕಲಕ್ಕೂ ಮಧ್ವ ತತ್ವವೇ ಆಧಾರ...

Putthige Lead
Published on

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

ಜನ್ಮನಕ್ಷತ್ರೋತ್ಸವ, ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ದ್ವಾರಕೆಯಲ್ಲಿ ಸಕಲ ಅಷ್ಟೈಶ್ವರ್ಯ ಇದ್ದರೂ ಸಹ ಶ್ರೀಕೃಷ್ಣನು ಮಧ್ವಾಚಾರ್ಯರ ಭಕ್ತಿ ಸಿದ್ಧಾಂತಕ್ಕೆ ಮೆಚ್ಚಿ ಉಡುಪಿಯಲ್ಲಿ ಬಂದು ನೆಲೆಸಿದನು. ಅಂತಹ ಮಧ್ವರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡುತ್ತಿರುವುದು ಉಡುಪಿ ಕೃಷ್ಣನಿಗೂ ಪ್ರಿಯವಾದ ಕಾರ್ಯವಾಗಿದೆ. ಜಗತ್ತಿನಲ್ಲಿ ಪ್ರತಿ ವಸ್ತುವೂ ವಿಭಿನ್ನ ಎಂಬ ಮಧ್ವರ ತತ್ವ ಇಂದಿಗೂ ಸ್ಪಷ್ಟ. ಸಕಲಕ್ಕೂ ಮಧ್ವ ತತ್ವವೇ ಆಧಾರ ಎಂಬುದು ಸಾಬೀತಾಗುತ್ತಿದೆ. ಮಧ್ವ ತತ್ವವು ಎಡ-ಬಲ ಸಿದ್ಧಾಂತವಲ್ಲ. ಅದು ನಡು ಸಿದ್ಧಾಂತ ಅಥವಾ ನಡು ಪಂಥವಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

222
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಭಾರತೀಯ ಅಂಚೆ ಇಲಾಖೆ. ಮಣಿಪಾಲ ಮಾಹೆ ವತಿಯಿಂದ ಸುಗುಣೇಂದ್ರ ತೀರ್ಥ ಶ್ರೀಪಾದರ ಜನ್ಮನಕ್ಷತ್ರೋತ್ಸವದ ನಿಮಿತ್ತ ಆಗಸ್ಟ್​ 30ರಂದು ಸಂಜೆ ಆಯೋಜಿಸಿದ್ದ ಶ್ರೀಮಧ್ವಾಚಾರ್ಯರ ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮಕ್ಕಳಿಗೆ ಸಂಸ್ಕಾರ ನೀಡಿ

333
ಕಾರ್ಯಕ್ರಮ ಉದ್ಘಾಟಿಸಿದ ಅದಮಾರು ಮಠದ ವಿಶ್ವಪ್ರಿಯ ಶ್ರೀ ಮಾತನಾಡಿ, ಶಿವಕುಮಾರನಾದ ಗಣಪತಿಯಂತೆ ಯಾರು ಸರ್ವಸ್ವವನ್ನೂ ತಂದೆ-ತಾಯಿಯಲ್ಲಿ ಕಾಣುತ್ತಾರೋ, ಯಾರು ಹೆತ್ತವರನ್ನು ಪೂಜಿಸುತ್ತಾರೆಯೋ ಅವರೆಲ್ಲ ಪ್ರಥಮ ಪೂಜಿತ ಗಣೇಶನಂತೆಯೇ ಸಮಾಜದಲ್ಲಿ ಪ್ರಥಮ ಆದ್ಯತೆಗೆ ಭಾಜನರಾಗುತ್ತಾರೆ. ಹೀಗಾಗಿ ಹೆತ್ತವರು ತಮ್ಮ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ನೀಡಬೇಕು ಎಂದರು.

ಅಂಚೆ ಚೀಟಿ ಬಿಡುಗಡೆ

Stamp
ಕರ್ನಾಟಕ ಚೀಫ್​ ಪೋಸ್ಟ್​ ಮಾಸ್ಟರ್​ ಜನರಲ್​ ಕೆ.ಪ್ರಕಾಶ್​ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಮಧ್ವಾಚಾರ್ಯರ ಸಂಸ್ಮರಣಾ ಅಂಚೆ ಚೀಟಿ ಬಿಡುಗಡೆ ಮಾಡಿದರು. ಶತಾವಧಾನಿ ರಾಮನಾಥ ಆಚಾರ್ಯ ಅವರು ಶ್ರೀ ಮಧ್ವಾಚಾರ್ಯರ ಕುರಿತು ಉಪನ್ಯಾಸ ನೀಡಿದರು.

ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಮಾಹೆ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್​ಪಾಲ್​ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ಮಹಾಂತೇಶ್​ ಆರ್​. ಚರಂತಿಮಠ, ಪೊಲೀಸ್​ ಇಲಾಖೆಯ ಹಿರಿಯ ಅಧಿಕಾರಿ ಸುಜೇಂದ್ರ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ದೆಹಲಿಯ ಕೇಂದ್ರೀಯ ಸಂಸ್ಕೃತ ವಿವಿಯ ಕುಲಪತಿ ಶ್ರೀನಿವಾಸ ವರ್ಖೇಡಿ ಉಪಸ್ಥಿತರಿದ್ದರು.

ಆರಂಭದಲ್ಲಿ ರಾಷ್ಟ್ರಗೀತೆ ಹಾಗೂ ಪುತ್ತಿಗೆ ವಿದ್ಯಾಸ್ಕೃಠದ ವಿದ್ಯಾರ್ಥಿಗಳು ವೇದಘೋಷ ಹೇಳಿದರು. ಮಾಹೆಯ ಪ್ರೊ. ವೈಸ್​ ಚಾನ್ಸಲರ್​ ಡಾ. ಕೆ.ಶರತ್​ ರಾವ್​ ಸ್ವಾಗತಿಸಿದರು. ಪುತ್ತಿಗೆ ಮಠದ ವಿದ್ವಾಂಸ ಡಾ. ಬಿ.ಗೋಪಾಲ ಆಚಾರ್ಯ ಹಾಗೂ ಪೂರ್ಣಿಮಾ ಜೆ. ಕೊಡವೂರು ಕಾರ್ಯಕ್ರಮ ನಿರೂಪಿಸಿದರು.

ನನ್ನಿಂದ ತಪ್ಪು ನುಡಿಸದಿರು ಕೃಷ್ಣ

DK BOX
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡಿ, ಮಾತನಾಡುವ ಮೊದಲೇ ನಾನು ಶ್ರೀಕೃಷ್ಣನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ನನ್ನಿಂದ ಯಾವುದೇ ತಪ್ಪು ಮಾತು ನುಡಿಸದಿರು ಎಂದು. ಏಕೆಂದರೆ, ನಾನೇನು ಮಾತನಾಡಿದರೂ ಅದು ಇತ್ತೀಚೆಗೆ ಭಾರಿ ತಪ್ಪಾಗುತ್ತಿದೆ. ನನ್ನ ಮಾತಿನಲ್ಲಿ ತಪ್ಪನ್ನು ಹುಡುಕುವವರೇ ಹೆಚ್ಚುತ್ತಿದ್ದಾರೆ. ಹೀಗಾಗಿ ನನ್ನಿಂದ ಸರಿಯಾಗಿ ಮಾತನಾಡಿಸು ತಂದೆ ಎಂದು ಪ್ರಾರ್ಥಿಸಿದರು. ಶುಭ ಗಳಿಗೆಯಲ್ಲಿ ಶ್ರೀಕೃಷ್ಣನ ಸನ್ನಿಧಿಯಲ್ಲಿ, ಸ್ವಾಮಿಗಳ ಜನ್ಮನಕ್ಷತ್ರದ ಉತ್ಸವದಲ್ಲಿ ಪಾಲ್ಗೊಂಡ ನನ್ನ ಬದುಕು ಧನ್ಯ. ಇದು ಭಾಗ್ಯ, ಇದು ಭಾಗ್ಯ ಇದು ಭಾಗ್ಯ ಎಂದು ದಾಸರ ಪದವನ್ನು ಹೇಳಿದರು. ಉಡುಪಿ ಅತ್ಯಂತ ಆಕರ್ಷಣೀಯ ಕ್ಷೇತ್ರ. ಇಲ್ಲಿಗೆ ಬಂದು ಧನ್ಯತಾ ಭಾವ ಮೂಡಿದೆ ಎಂದರು.

ಪುತ್ತಿಗೆ ಶ್ರೀಗಳಿಗೆ ಗೌರವ ಡಾಕ್ಟರೇಟ್​ ಪ್ರದಾನ

ಧಾರ್ಮಿಕ ಕ್ಷೇತ್ರದಲ್ಲಿ ಅಪಾರವಾದ ಸೇವಾ ಕೈಂಕರ್ಯ ಕೈಗೊಂಡ ಹಿನ್ನೆಲೆಯಲ್ಲಿ ಪುತ್ತಿಗೆ ಸುಗುಣೆಂದ್ರ ಶ್ರೀಗಳಿಗೆ ಆಫ್ರಿಕಾದ ಮೈಲ್ಸ್​ ಲೀಡರ್​ ಶಿಪ್​ ಯೂನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್​ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆಫ್ರಿಕಾ ಕುಲಪತಿ ಡಾ. ಕೆ. ರವಿ ಆಚಾರ್ಯ ಮಾತನಾಡಿ, ಪ್ರಶಸ್ತಿ ಪ್ರದಾನ ಮಾಡುತ್ತಿರುವ ಕಾರಣ ಕುರಿತು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net