

ವಿಜಯವಾಣಿ ಸುದ್ದಿಜಾಲ ಉಡುಪಿ
ವಿಶ್ವವ್ಯಾಪಿಯಾಗಿ ಶ್ರೀಕೃಷ್ಣನ ಗೀತಾ ಪ್ರಸಾರಕ್ಕಾಗಿ ಈಗಾಗಲೇ ವಿಶ್ವದ 12 ದೇಶಗಳಲ್ಲಿ ಕೃಷ್ಣ ಮಂದಿರ ನಿರ್ಮಿಸಿರುವ ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು, ಮತ್ತೊಂದು ಕೃಷ್ಣ ಮಂದಿರ ನಿರ್ಮಾಣಕ್ಕಾಗಿ ಇಂಗ್ಲಂಡ್ನ ಲಂಡನ್ನಲ್ಲಿ ಚರ್ಚ್ ಖರೀದಿ ಮಾಡಿದ್ದಾರೆ.
ಉಡುಪಿಯ ರಾಜಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಾಜಿ ಎಂಎಲ್ಸಿ ಗೋ.ಮಧುಸೂದನ್ ವಿರಚಿತ ಶ್ರೀ ಭಗವಾನುವಾಚ ಗ್ರಂಥ ಬಿಡುಗಡೆ ಮಾಡಿದ ಶ್ರೀಗಳು, ಈ ಮಹತ್ವದ ಸಂಗತಿಯ ಮಾಹಿತಿಯನ್ನು ಸಭೆಗೆ ನೀಡಿದರು.
ಇಂಗ್ಲಂಡ್ನಿಂದ ಭಾರತಕ್ಕೆ ಆಗಮಿಸಿ ಇಲ್ಲಿನ ಧಾರ್ಮಿಕ ಶ್ರದ್ಧೆಗಳಿಗೆ ಘಾಸಿ ಮಾಡಿದ ಬ್ರಿಟಿಷರ ನೆಲದಲ್ಲೇ ಕೃಷ್ಣನ ಶಕ್ತಿ, ಭಗವದ್ಗೀತೆಯ ಪ್ರಸಾರ ಮಾಡುವ ಮಹತ್ ಸಂಕಲ್ಪ ಮಾಡಿದ್ದೇವೆ. ಇಂಗ್ಲಂಡ್ನ ಸೇಂಟ್ ಆಲ್ಬನ್ಸ್ನಲ್ಲಿರುವ ಚರ್ಚ್ ಖರೀದಿ ಮಾಡಲು ಎರಡು ವರ್ಷದಿಂದ ಶ್ರಮ ವಹಿಸಲಾಗಿತ್ತು. ಅದೀಗ ಯಶ ಕಂಡಿದೆ. ವಿಶ್ವ ಧ್ಯಾನ ದಿನವಾದ ಡಿ.21ರಂದೇ ಚರ್ಚ್ ಖರೀದಿ ಪ್ರಕ್ರಿಯೆ ಮುಗಿದಿದೆ. ಕೃಷ್ಣನ ಆಶಯದಂತೆ ಆ ನೆಲದಲ್ಲಿಯೂ ಸಹ ಧರ್ಮ ಸ್ಥಾಪನೆಗಾಗಿ ಪುತ್ತಿಗೆ ಮಠದಿಂದ ಗೀತೆಯ ಪ್ರಸಾರ ಮಾಡಲಾಗುವುದು ಎಂದು ಶ್ರೀಗಳು ಹೇಳಿದರು.