

ಮಂಡ್ಯ: ಗೊರವಾಲೆ ಪಟೇಲ್ ಸಿದ್ದೇಗೌಡರು ಅನೇಕ ಗ್ರಾಮಗಳ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡಿದವರು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ದುದ್ದ ಹೋಬಳಿ ಗೊರವಾಲೆ ಗ್ರಾಮದಲ್ಲಿ ಪಟೇಲ್ ಸಿದ್ದೇಗೌಡರ ಪುತ್ಥಳಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪಟೇಲ್ ಸಿದ್ದೇಗೌಡರ ಪ್ರತಿಮೆ ಅನಾವರಣವನ್ನು ಮಾಜಿ ಪ್ರಧಾನಿ ದೇವೇಗೌಡರ ಕೈಯಿಂದ ಅನಾವರಣ ಮಾಡಿಸಬೇಕೆಂದು ಗ್ರಾಮಸ್ಥರು ಬಯಸಿದ್ದರು. ಕುಮಾರಣ್ಣ ಬರಬೇಕೆಂದು ಹೇಳುತ್ತಿದ್ದರು. ಆದರೆ ಅವರ ಕೆಲಸದ ಒತ್ತಡದಿಂದ ಬರಲು ಆಗದ ಕಾರಣ ಪುತ್ಥಳಿ ಅನಾವರಣ ಮಾಡಲಾಗಿದೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಸಂಸದರಾಗಿ ಮಾಡಲು ಮಂಡ್ಯ ಜಿಲ್ಲೆಯ ಜನ ರಾಜಕೀಯ ಪುನರ್ಜನ್ಮ ತಂದು ಕೊಟ್ಟು ರಾಷ್ಟ್ರದ ಸೇವೆ ಮಾಡಲು ಅವಕಾಶ ಮಾಡಿಕೊಟ್ಟವರು. ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ಕೆಲಸ ಮಾಡುವ ಅವಕಾಶ ಮಾಡಿಕೊಟ್ಟಿದ್ದೀರಿ ಸಮರ್ಥವಾಗಿ ನಿಭಾಯಿಸಲು ದೆಹಲಿಯಲ್ಲಿದ್ದರೂ ಅವರ ಮನಸ್ಸು ಮಾತ್ರ ಮಂಡ್ಯದಲ್ಲಿ ಇದೆ. ಎಚ್ಡಿಕೆ ಹಾಗೂ ಜೆಡಿಎಸ್ ಪಕ್ಷದ ಮೇಲೆ ಜಿಲ್ಲೆಯ ಜನತೆ ಅಭಿಮಾನ ಇಟ್ಟುಕೊಂಡಿದ್ದಾರೆ. ಅದರಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಚ್ಡಿಕೆ ಪಣತೊಟ್ಟು ನಿಂತಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಗೊರವಾಲೆ ಗ್ರಾಮದ ಯಾವುದೇ ಭಾಗದಲ್ಲೂ ಅಭಿವೃದ್ಧಿ ಕೆಲಸ ಆಗಿದೆ ಎಂದರೆ ಇದನ್ನು ಪಟೇಲ್ ಸಿದ್ದೇಗೌಡರು ಮಾಡಿದ್ದಾರೆ ಎಂದು ಎಲ್ಲರೂ ಹೇಳುತ್ತಾರೆ. ಅದಕ್ಕಾಗಿ ಅವರು ಮೊದಲನೇ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಗೊರವಾಲೆ ಗ್ರಾಮದ ಕಲ್ಯಾಣ ಮಂಟಪವನ್ನು ಪಟೇಲ್ ಸಿದ್ದೇಗೌಡರ ಹೆಸರಿನಲ್ಲಿ ನಿರ್ಮಾಣ ಮಾಡಿ ಅದನ್ನು ಉದ್ಘಾಟನೆ ಮಾಡಲಾಗುವುದು ಎಂದರು.
ದುದ್ದ ಹೋಬಳಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಿಲ್ಲಲು ಬಿಡಲ್ಲ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಈ ಭಾಗದಲ್ಲಿ ಮಾಡುವ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು. ಯಾವುದೇ ಸಂದರ್ಭದಲ್ಲಿ ಗೊರವಾಲೆ ಗ್ರಾಮವನ್ನು ಮರೆಯಲು ಸಾಧ್ಯವಿಲ್ಲ. ಚುನಾವಣೆ ಸಂದರ್ಭದಲ್ಲಿ ಅತಿ ಹೆಚ್ಚು ಮತಗಳನ್ನು ನಮಗೆ ಕೊಡುವ ಮೂಲಕ ನಮ್ಮ ಪರ ಇದ್ದಾರೆ ಎಂದರು.
ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಪ್ಪಟ ಶಿಷ್ಯ ಪಟೇಲ್ ಸಿದ್ದೇಗೌಡ. ಊರಿಗೋಸ್ಕರ ತಮ್ಮನ್ನು ತಾವೇ ಅರ್ಪಿಸಿಕೊಂಡು ಮೂಲ ಸೌಕರ್ಯ ತಂದಿರುವುದು ಪಟೇಲ್ ಸಿದ್ದೇಗೌಡರ ಶ್ರಮ ಎಂದು ತಿಳಿಸಿದರು.
ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮನ್ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು, ಜೆಡಿಎಸ್ ಮುಖಂಡರಾದ ಎಚ್.ಟಿ.ಬಾಲರಾಜು, ಪುರದಕೊಪ್ಪಲು ಶಂಕರೇಗೌಡ, ಆರ್ಎಪಿಸಿಎಂಎಸ್ ಮಾಜಿ ನಿರ್ದೇಶಕ ಜಿ.ಎಲ್.ಸತೀಶ್, ಜಿ.ಎಸ್.ಕೃಷ್ಣೇಗೌಡ, ಸಿದ್ದೇಗೌಡ, ಹೊಳಲು ಯೋಗೇಶ್ ಇತರರಿದ್ದರು.