ಯುವಪೀಳಿಗೆಯಿಂದ ರಾಜಕೀಯ ಬದಲಾವಣೆ : ಉದ್ಯಮಿ ಪುಟ್ಟಸ್ವಾಮಿಗೌಡ ಆಶಯ

14_GBD_Putta
Published on

ಗೌರಿಬಿದನೂರು : ಇತ್ತೀಚಿನ ದಿನಗಳಲ್ಲಿ ಸ್ವಾರ್ಥಿಗಳು ಹೆಚ್ಚಾಗುತ್ತಿದ್ದಾರೆ. ಸ್ವಜನ ಪಕ್ಷಪಾತ, ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಕೆ.ಎಚ್.ಪುಟ್ಟಸ್ವಾಮಿಗೌಡ, ಯುವ ಸಮುದಾಯದಿಂದ ಮಾತ್ರ ನವ ಸಮಾಜ ನಿರ್ಮಾಣ ಸಾಧ್ಯ ಎಂಬ ಅಭಿಪ್ರಾಯಪಟ್ಟರು.

ತಾಲೂಕಿನ ಹೊಸೂರಿನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪುಟ್ಟಸ್ವಾಮಿಗೌಡ ಬಣದ ಯುವಕರ ಪಡೆಯ ಸಮಾವೇಶ ಉದ್ಘಾಟಿಸಿ ಮಾತನಾಡಿ, ಯುವ ಸಮುದಾಯದಲ್ಲಿನ ಉತ್ಸಾಹದಿಂದ ತಾಲೂಕಿನ ರಾಜಕೀಯದಲ್ಲಿ ಬದಲಾವಣೆ ತರಲು ಸಾಧ್ಯ ಎಂಬುದನ್ನು ಮನಗಂಡು ಗ್ರಾಪಂ ಚುನಾವಣೆಯಲ್ಲಿನ ಸೋಲು-ಗೆಲುವು ಲೆಕ್ಕಿಅದೆ ಯುವಕರಿಗೆ ಆದ್ಯತೆ ನೀಡಿದ್ದೇವೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಹೊಸೂರು ಮಂಜುನಾಥ್ ಈ ಭಾಗದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಆದರೆ ಗ್ರಾಪಂ ಚುನಾವಣೆಯಲ್ಲಿ ಅವರಿಗೆ ನಿರೀಕ್ಷಿತ ಜನಬೆಂಬಲ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಪುಟ್ಟಸ್ವಾಮಿಗೌಡ, ಅಭಿವೃದ್ಧಿಗೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿದವರನ್ನು ಎಂದಿಗೂ ಮರೆಯಬಾರದು ಎಂದರು.

ಯುವಕರಿಂದ ದೇಶದಲ್ಲಿ ಬದಲಾವಣೆ ಸಾಧ್ಯ ಎಂಬುದನ್ನು ಅಸ್ಸಾಂ ಹಾಗೂ ದೆಹಲಿ ಚುನಾವಣೆ ಫಲಿತಾಂಶಗಳು ನಿರೂಪಿಸಿವೆ. ಯುವಕರು ಜಾತಿ, ಮತ, ಧರ್ಮಗಳ ಬೇಧವನ್ನು ಬದಿಗೊತ್ತಿ ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದು ಈ ಹಿನ್ನೆಲೆಯಲ್ಲಿ ರಾಜಕೀಯದಲ್ಲಿಯೂ ತೊಡಗಿಕೊಳ್ಳಬೇಕು ಎಂದು ಜಿಪಂ ಸದಸ್ಯ ಎಚ್.ವಿ.ಮಂಜುನಾಥ್ ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಆಡಳಿತ ಪಕ್ಷಕ್ಕೆ ನೀಡುವ ಮನ್ನಣೆಯನ್ನು ಪುಟ್ಟಸ್ವಾಮಿಗೌಡ ಬಣಕ್ಕೆ ನೀಡಿದ್ದಾರೆ. ಕರೊನಾ ಸಂದರ್ಭದಲ್ಲಿ ಶಾಸಕರು ಕ್ಷೇತ್ರದ ಬಡವರ ನಿರುದ್ಯೋಗಿಗಳ ಕಷ್ಟಗಳಿಗೆ ಸ್ಪಂದಿಸಲಿಲ್ಲ, ಆದರೆ ಪುಟ್ಟಸ್ವಾಮಿಗೌಡರು ಎಲ್ಲ ವರ್ಗಗಳಿಗೂ ತಮ್ಮ ಕೈಲಾದಷ್ಟು ನೆರವು ಒದಗಿಸಿದರು ಎಂದು ಕೋಚಿಮುಲ್ ನಿರ್ದೇಶಕ ಜೆ .ಕಾಂತರಾಜ್ ಹೇಳಿದರು.

ಮುಖಂಡರಾದ ಜಿ.ಕೆ.ಸತೀಶ್‌ಕುಮಾರ್, ಅಬ್ದುಲ್ಲಾ, ಪವನ್‌ರೆಡ್ಡಿ, ಗೆದರೆ ಸತೀಶ್, ಹರೀಶ್, ನಾಗರಾಜ್, ಅಂಬರೀಷ್ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ಗಂಗಾಧರಪ್ಪ, ಕೆ.ಎಸ್. ಅನಂತರಾಜು ಹಾಗೂ ಮುಖಂಡರು, ಯುವಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net