

ನಾಪೋಕ್ಲು: ಸಮೀಪದ ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಶುಕ್ರವಾರ ಕೊಡಗಿನ ಪುತ್ತರಿ ಹಬ್ಬದ ದಿನವನ್ನು ನಿಶ್ಚಯಿಸಲಾಯಿತು. ದೇವಾಲಯದ ತಕ್ಕ ಮುಖ್ಯಸ್ಥರು ಪ್ರಮುಖರ ಹಾಗೂ ಭಕ್ತರ ಸಮ್ಮುಖದಲ್ಲಿ ಶಶಿಕುಮಾರ್ ಜ್ಯೋತಿಷ್ಯದ ಪ್ರಕಾರ ರಾಶಿ ಫಲ ಪರಿಶೀಲಿಸಿ ದಿನ ನಿಗದಿ ಮಾಡಿದರು.
ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಡಿಸೆಂಬರ್ 14ರಂದು ಶನಿವಾರ ರಾತ್ರಿ ಕರ್ಕಾಟಕ ಲಗ್ನದ ರೋಹಿಣಿ ನಕ್ಷತ್ರದಲ್ಲಿ 7.30 ಗಂಟೆಗೆ ಪುತ್ತರಿ ಹಬ್ಬದ ನೆರೆ ಕಟ್ಟುವುದು. ರಾತ್ರಿ 8.30 ಗಂಟೆಗೆ ಕದಿರು ಕೊಯ್ಯುವುದು, ರಾತ್ರಿ 9.30 ಊಟೋಪಚಾರ ನಡೆಯಲಿದೆ.
ಸಾರ್ವಜನಿಕರಿಗೆ ಡಿಸೆಂಬರ್ 14ರಂದು ಶನಿವಾರ ರಾತ್ರಿ 7.50ಕ್ಕೆ ನೆರೆ ಕಟ್ಟುವುದು, ರಾತ್ರಿ 8.50ಕ್ಕೆ ಕದಿರು ತೆಗೆಯುವುದು ರಾತ್ರಿ 9.50ಕ್ಕೆ ಊಟೋಪಚಾರ ಸಮಯವನ್ನು ನಿಗದಿ ಮಾಡಿಕೊಳ್ಳಲಾಗಿದೆ. ಇದಕ್ಕೂ ಮುನ್ನಾದಿನ ಶುಕ್ರವಾರ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಕಲ್ಲಾಡ್ಚ ಹಬ್ಬ ನಡೆಯಲಿದೆ.
ಅರ್ಚಕ ಶಶಿಕುಮಾರ್, ಕಣಿಯರ ನಾಣಯ್ಯ ಕುಟುಂಬದವರು ಜ್ಯೋತಿಷ್ಯದ ಪ್ರಕಾರ ರಾಶಿ ಫಲ ಪರಿಶೀಲಿಸಿ ದಿನ ನಿಗದಿ ಮಾಡಿದ ಬಳಿಕ ದೇವತಕ್ಕರಾದ ಪರದಂಡ ಸುಬ್ರಮಣಿ ಕಾವೇರಪ್ಪ, ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ದಿನ ನಿಗದಿ ಪಟ್ಟಿಗೆ ವಿಶೇಷ ಪ್ರಾರ್ಥನೆಯ ಮೂಲಕ ಅರ್ಚಕರಿಗೆ ನೀಡಿ ಮುಖ್ಯ ಅರ್ಚಕ ಕುಶ ಭಟ್ ಮತ್ತು ಜಗದೀಶ್ ಅವರು ಪೂಜೆ ನೆರವೇರಿಸಿದ ಬಳಿಕ ತೀರ್ಥ ಪ್ರಸಾದ ನೀಡುವುದರ ಮೂಲಕ ತಕ್ಕ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.
ನಂತರ ಭಕ್ತ ಜನ ಸಂಘದ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ದೇವತಕ್ಕರಾದ ಪರದಂಡ ಸುಬ್ರಮಣಿ ಕಾವೇರಪ್ಪ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿ ಮಾಹಿತಿ ನೀಡಿದರು.
ತಕ್ಕ ಮುಖ್ಯಸ್ಥ ಕುಂಡ್ಯೋಳಂಡ ರಮೆಶ್ ಮುದ್ದಯ್ಯ, ಪಾಂಡಂಡ ನರೇಶ್, ಅಂಜಪರವಂಡ ರವಿ ಚೋಮಣಿ, ಕೇಟೋಳಿರ ಸನ್ನಿ ಸೋಮಣ್ಣ , ಕುಂಡಿಯೊಳಂದ ರಮೇಶ್ ಮುದ್ದಯ್ಯ, ಕಲ್ಯಾಟಂಡ ಮುತ್ತಪ್ಪ, ರಾಜ ಅಪ್ಪಣ್ಣ, ಅಪ್ಪಣ್ಣ, ಕುಟ್ಟಪ್ಪ, ಬಟ್ಟೀರ ಚೋಂದಮ್ಮ, ಕುಟ್ಟಂಜೆಟ್ಟಿರ ಶಾಮ್ ಬೋಪಣ್ಣ, ಮೇದಪ್ಪ, ಕೇಟೋಳಿರ ಗಣಪತಿ, ಮಾಚರ್ಂಡ ಅಯ್ಯಪ್ಪ, ಪರದಂಡ ಸದಾ ನಾಣಯ್ಯ, ಬಿದ್ದಾಟಂಡ ಬೇಬಿ ಬೆಳ್ಯಪ್ಪ, ಕಣಿಯರ ನಾಣಯ್ಯ , ಪರದಂಡ ಸದಾ ನಾಣಯ್ಯ , ಕಲ್ಯಾಟಂಡ ರಾಜ ಅಪ್ಪಣ್ಣ, ಮೇರಿಯಂಡ ಅರಸು ಅಚ್ಚಮ್ಮ, ಗಗನ್, ಭುವೇರಿಯಂಡ ಪೂವಣ್ಣ, ಕೊಳುವಂಡ ಕಾರ್ಯಪ್ಪ ಇತರರು ಇದ್ದರು.