

ವಿರಾಜಪೇಟೆ:
ಒಗ್ಗಟ್ಟಿನ ಬಲ ಇದ್ದಾಗ ಮಾತ್ರ ಕೊಡವ ಜನಾಂಗ ಉಳಿಯಲು ಸಾಧ್ಯ ಎಂದು ಬಾಳುಗೊಡು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹೇಳಿದರು. ಕೊಡವ ಪೊಮ್ಮಕ್ಕಡ ಕೂಟದ ವತಿಯಿಂದ ಕೊಡವ ಸಮಾಜದ ಆವರಣದಲ್ಲಿ ಬುಧವಾರ ನಡೆದ ಪುತ್ತರಿ ಒತ್ತೋರ್ಮೆ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕೊಡವ ಪೊಮ್ಮಕ್ಕಡ ಕೂಟ ಜನಾಂಗದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಏಳಿಗೆಯನ್ನು ಪಡೆಯಬೇಕು. ತಾಯಿಯೇ ನಮ್ಮ ಮೊದಲ ಗುರು. ನಾವು ಭೂಮಿತಾಯಿಯನ್ನು ಪೂಜೆ ಮಾಡುವವರು. ಭೂಮಿಗೆ ತಾಯಿಯ ಸ್ಥಾನ ನೀಡಿದ್ದೇವೆ. ಹಾಗಾಗಿ ತಾಯಿ, ಹೆಂಡತಿ, ಮಕ್ಕಳು ಎಲ್ಲರಲ್ಲೂ ಪೂಜನೀಯ ಭಾವ ಹೊಂದಿದ್ದೇವೆ. ಹೆಣ್ಣಿನ ಪಾತ್ರ ಮಹತ್ವ ಪಡೆದಿದೆ. ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಮಹಿಳೆ ಇದ್ದಾಳೆ. ತಾಯಿ ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಬೇಕು. ಜೊತೆಗೆ ವಿದ್ಯೆ ಕೊಡಬೇಕು. ಬುದ್ಧಿ ಹೇಳಬೇಕು. ಮಕ್ಕಳನ್ನು ಆಸ್ತಿಯಾಗಿ ಮಾಡಿ ಅವರನ್ನು ಓದಿಸಿ ಅವರ ಕಾಲ ಮೇಲೆ ಅವರನ್ನು ನಿಲ್ಲುವಂತೆ ಮಾಡಬೇಕು.
ಕೊಡವರಿಗೆ ಎಸ್ಟಿ ಟ್ಯಾಗ್ ದೊರೆತಲ್ಲಿ ನಮ್ಮ ಸಮುದಾಯ ಮತ್ತಷ್ಟು ಮುಂದುವರೆಯಲು ಸಾಧ್ಯವಾಗುತ್ತದೆ. ಎಲ್ಲರಿಗೂ ಸಮಯದ ಮಹತ್ವ ತಿಳಿದಿರಬೇಕು. ಹಾಗಿದ್ದಲ್ಲಿ ಮಾತ್ರ ಸಮಾಜದಲ್ಲಿ, ಜೀವನದಲ್ಲಿ ಮುಂದುವರೆಯಲು ಸಾಧ್ಯ. ಬಾಳುಗೊಡು ಸಮಾಜದಲ್ಲಿ ಮುಂದಿನ ಬಾರಿ ಹುತ್ತರಿ ಹಬ್ಬ ಆಚರಣೆ ಮಾಡಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ ಮಾತನಾಡಿ ದೇವರು ಹೆಣ್ಣಿಗೆ ಒಂದು ಅದ್ಭುತ ಶಕ್ತಿ ನೀಡಿರುತ್ತಾರೆ. ತಾಯಿ ಎನ್ನುವುದು ಬಿಂಬ. ಎಲ್ಲಾ ಕೆಲಸವನ್ನು ಸಮಚಿತ್ತದಿಂದ ನಿಭಾಯಿಸುವುದು ನಮ್ಮ ಕರ್ತವ್ಯ. ಸಂಸಾರ ಸಾಗಿಸಲು ತಾಳ್ಮೆ ಮುಖ್ಯ. ಗಂಡಸರು ಬಹಳ ಒತ್ತಡದಲ್ಲಿ ಇರುತ್ತಾರೆ. ಆದರೆ ಅವರ ಸಪೋರ್ಟ್ ಹೆಂಗಸರಿಗೆ ಬೇಕು. ಅವರು ಸಮಾಧಾನವಾಗಿದ್ದರೆ ಮಹಿಳೆಗೆ ಎಲ್ಲವೂ ದೊರೆತಂತೆ ಎಂದರು.
ಚುಮ್ಮಕ್ಕ ಗ್ರೂಪ್ ಅಧ್ಯಕ್ಷೆ ಉದ್ದಪಂಡ ವಿಮಲ ಮಾತನಾಡಿ ಇಲ್ಲಿ ಎಲ್ಲ ಮಹಿಳೆಯರಿಗೂ ವೇದಿಕೆ ದೊರಕುವಂತಾಗಿದೆ. ಜಂಜಾಟದ ನಡುವೆ ಇರುವ ಮಹಿಳೆಯರಿಗೆ ಈ ರೀತಿಯ ಕಾರ್ಯಕ್ರಮ ಒಂದು ವೇದಿಕೆ ಕಲ್ಪಿಸಿದೆಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಪೊಮ್ಮಕ್ಕದ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಕೊಡವ ಸಮುದಾಯದಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಇದು ಹೀಗೆ ಮುಂದುವರೆಯಬಾರದು. ಮನೆ ತುಂಬ ಮಕ್ಕಳಿರಬೇಕು. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ತಿಳಿ ಹೇಳಿ ಹೆಚ್ಚು ಮಕ್ಕಳ ಹುಟ್ಟಿಗೆ ಕಾರಣರಾಗಿ ಕೊಡವ ಜನಾಂಗದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಕೂಟದ ಹಿರಿಯ ಸಲಹೆಗಾರರಾದ ನಾಯಕಂಡ ಬೇಬಿ ಚಿಣ್ಣಪ್ಪ ಕೊಡವ ಸಂಪ್ರದಾಯದAತೆ ತಪ್ಪಡಕ ಕಟ್ಟುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿ ಗಣ್ಯರು ಸಾಂಪ್ರದಾಯಿಕ ಉಡುಪು ಧರಿಸಿ ದೇವರ ನೆಲೆಯಲ್ಲಿ ಕದಿರು ಕಟ್ಟಿ ಅಕ್ಕಿ ಹಾಕಿ ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ಇದೆ ಸಂದರ್ಭ ಮೂರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಹಿರಿಯ ತಾಯಂದಿರನ್ನು ಚೀಟಿ ಎತ್ತುವುದರ ಮೂಲಕ ಆಯ್ಕೆ ಮಾಡಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಪುಚ್ಚಿಮಂಡ ರಾಧಾ ಕಾರ್ಯಪ್ಪ, ಮುಂಡAಡ ರಾಣು ಮಂದಣ್ಣ, ಪಾಲಚಂಡ ಸೀಮಾ ಸನ್ಮಾನಕ್ಕೆ ಪಾತ್ರರಾದರು. ಮುಖ್ಯ ಅತಿಥಿಗಳಾಗಿದ್ದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಶಾಲಿನಿ ಕಾರ್ಯಪ್ಪ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಅಮ್ಮುಣಿಚಂಡ ಈಶ್ವರಿ ಗಂಗಮ್ಮ, ಸಲಹಾ ಸಮಿತಿ ಸದಸ್ಯರಾದ ಬಿದ್ದಂಡ ರಾಣಿ, ಹಾಗೂ ನಾಯಕಂಡ ಬೇಬಿ ಚಿಣ್ಣಪ್ಪ ಇದ್ದರು.
ಚುಮ್ಮಕ್ಕ ಗುಂಪಿನ ಸದಸ್ಯರು ಸ್ವಾಗತ ನೃತ್ಯ, ಕೋಲಾಟ ಹಾಗೂ ಇತರ ನೃತ್ಯ ಪ್ರದರ್ಶನ ನೀಡಿದರು. ಇದೆ ಸಂದರ್ಭ ಹಾಡು ನೃತ್ಯ ಪ್ರದರ್ಶನ ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.
ಕೊನೆಯಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆ ಹಾಗೂ ವಾಲಗತ್ತಾಟ್ ಸ್ಪರ್ಧೆ, ಸೀರೆಯ ಬೆಲೆ ಹೇಳುವ ಸ್ಪರ್ಧೆ ನಡೆದು ನಿಖರ ಬೆಲೆ ಹೇಳಿದವರಿಗೆ ಸೀರೆ ಬಹುಮಾನವಾಗಿ ನೀಡಲಾಯಿತು.