

ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಮಾತನಾಡಿದರೆ ರಾಜ್ಯದಲ್ಲಿ ದೊಡ್ಡ ನಾಯಕರಾಗುತ್ತೇವೆ ಎಂಬ ಮನಸ್ಥಿತಿಯಿದ್ದರೆ ಅದನ್ನು ಬಿಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಟಾಂಗ್ ನೀಡಿದರು.
ರಾಜ್ಯದಲ್ಲಿ ಚೆನ್ನಾಗಿ ಅಭಿವೃದ್ಧಿ ಕೆಲಸ ಮಾಡಲೆಂದು ಜನರು 136 ಸ್ಥಾನ ಕೊಟ್ಟಿದ್ದಾರೆ. ಆದರೆ ಕಳೆದ 14 ತಿಂಗಳಲ್ಲಿ ಏನು ಕೆಲಸ ಮಾಡಿದ್ದೀರಾ ಎಂಬುದನ್ನು ತಿಳಿಸಬೇಕು. ಮೂರು ಕ್ಷೇತ್ರದ ಉಪಚುನಾವಣೆ ನಂತರ 136 ಸ್ಥಾನಗಳು ಎಷ್ಟು ಗುಂಪಾಗಲಿದೆ ಎನ್ನುವುದು ತಿಳಿಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಭವಿಷ್ಯ ನುಡಿದರು.
ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಬೇಕು. ಚಲುವರಾಯಸ್ವಾಮಿ 1995ರಿಂದ ರಾಜಕಾರಣ ಮಾಡಿಕೊಂಡು ಬಂದಿದ್ದು, ಅವರ ಅದೃಷ್ಟ ಚನ್ನಾಗಿದೆ. ಹೊಸ ಅಭ್ಯರ್ಥಿಗಳನ್ನು ರಾಜಕೀಯಕ್ಕೆ ತರುವುದರ ಜತೆಗೆ ಆರ್ಥಿಕವಾಗಿ ಬಲಿಷ್ಟರಾಗಿರುವವರನ್ನು ಹೇಗೆ ಬಳಸಿಕೊಳ್ಳಬೇಕೆಂದು ತಿಳಿದಿರುವ ವ್ಯಕ್ತಿ ಎಂದು ವ್ಯಂಗ್ಯವಾಡಿದ ಸಿಆರ್‌ಎಸ್, ದೇವೇಗೌಡರು ಭಾವನಾತ್ಮಕ ಜೀವಿ. ಅವರ ಕಳಕಳಿ ಹಾಗೂ ವಿಶೇಷವಾಗಿ ರೈತರ ಮೇಲಿನ ಸಹಾನುಭೂತಿಯನ್ನು ಬಹಳ ಹಂತಿರದಿಂದ ತಿಳಿದಿದ್ದೇವೆ. ಅವರ ಭಾವನೆಗಳೇ ಹಾಗೆ. ಹೃದಯದಿಂದ ಮಾತನಾಡುತ್ತಾರೆ ಎಂದು ಸಮರ್ಥಿಸಿಕೊಂಡರು.
ದೇವೇಗೌಡರು ಪ್ರಧಾನಿಯಾಗಿ 11 ತಿಂಗಳು, ಮುಖ್ಯಮಂತ್ರಿಯಾಗಿ 17 ತಿಂಗಳು ಮಾತ್ರ ಅಧಿಕಾರ ನಡೆಸಿದ್ದಾರೆ. ಆದರೆ ಅವರು ನಿಮ್ಮಂತೆ ಪಕ್ಷ ಬದಲಾಯಿಸಿಲ್ಲ. ದೇವೇಗೌಡ ನಡಾವಳಿಗಳನ್ನು ವಿಧಾನಸೌಧದ ಪುಸ್ತಕಗಳಲ್ಲಿ ಓದಿ ತಿಳಿದಿಕೊಳ್ಳಿ. ಕುಮಾರಸ್ವಾಮಿ ಸ್ಟೀಲ್ ಕಂಪನಿಯಲ್ಲಿ ವಸೂಲಿ ಮಾಡುತ್ತಾರೆಂದು ಹೇಳಿದ್ದಾರೆ. ಎಚ್‌ಡಿಕೆ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರು ಎಂಬುದನ್ನು ಮರೆತು ಮಾತನಾಡುತ್ತಿದ್ದೀರಿ. ಅವರು ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹಣಕ್ಕಾಗಿ ಮುಂದಾಗಿದ್ದರೇ ಎರಡು ಬಾರಿ ಮುಖ್ಯಮಂತ್ರಿಯಾಗಿ ಲಾಟರಿ ಮತ್ತು ಸಾರಾಯಿ ಮಾರಾಟ ರದ್ದುಗೊಳಿಸಿ ರಾಜ್ಯದ ಹೆಣ್ಣು ಮಕ್ಕಳ ಪರವಾಗಿ ತೀರ್ಮಾನ ಮಾಡಿದ್ದಾರೆ. ಆಗ ಸಿಆರ್‌ಎಸ್ ಬೇಡ ಎಂದು ಹೇಳಲು ಬಂದಿದ್ದರು. ಅದಕ್ಕೆ ಅವರನ್ನು ಬಾಗಿಲ ಬಳಿ ನಿಲ್ಲಿಸಿದ್ದರು. ಇನ್ನು ಕೃಷಿ ಇಲಾಖೆಯ ಅಧಿಕಾರಿಗಳೇ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ನಿಮ್ಮ ಇಲಾಖೆ ಕಥೆ ಏನಾಯ್ತು ಎಂದು ವ್ಯಂಗ್ಯವಾಡಿದರು.
ಚನ್ನಪಟ್ಟಣ ಜನತೆ ದೇವೇಗೌಡರು, ಕುಮಾರಸ್ವಾಮಿ ಅವರು ಮಾಡಿರುವಂತಹ ಕೆಲಸಗಳನ್ನು ನೆನೆದು ನಿಖಿಲ್ ಕುಮಾರಸ್ವಾಮಿಯನ್ನು ಆಯ್ಕೆ ಮಾಡುವ ತೀರ್ಮಾನ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಕಾರ್ಯಕರ್ತರು ಚನ್ನಪಟ್ಟಣದಲ್ಲಿ ನೆಲೆಯೂರಿ ನಿಖಿಲ್ ಗೆಲ್ಲಿಸಲು ಪಣತೊಟ್ಟಿದ್ದಾರೆ ಎಂದು ಟಾಂಗ್ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಅಧಿಕಾರಸ್ಥರು ತಾಳ್ಮೆ ವಹಿಸಬೇಕು. ಅಧಿಕಾರದಲ್ಲಿರುವವರನ್ನು ಪ್ರಶ್ನೆ ಮಾಡುತ್ತಾರೆ, ತಾಳ್ಮೆಯಿಂದ ಉತ್ತರ ನೀಡಿ, ಸಮಸ್ಯೆ ಬಗೆಹರಿಸಬೇಕು. ತಾಳ್ಮೆ ವಹಿಸದಿದ್ದರೆ ಕೀಲಾರ ಜಯರಾಂ ಜತೆ ನಡೆದಂತಹ ಘಟನೆಗಳು ಸಂಭವಿಸುತ್ತವೆ. ಸಾತನೂರು, ಕೋಡಂಬಳ್ಳಿ ವ್ಯಾಪ್ತಿಯಲ್ಲಿ ಮಂಡ್ಯ ಜಿಲ್ಲೆಯವರೇ ಪೂರ್ಣ ಆವರಿಸಿಕೊಂಡು ಚುನಾವಣಾ ಪ್ರಚಾರ ಮಾಡುತ್ತಿದ್ದೇವೆ. ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ನಡುವೆ ಏನು ಭಿನ್ನಾಭಿಪ್ರಾಯ ಇದೆಯೋ ತಿಳಿಯದು. ಅವರು ನಾವು ಪ್ರಚಾರ ಮಾಡುವ ವ್ಯಾಪ್ತಿಯಲ್ಲಿ ಕಂಡುಬಂದಿಲ್ಲ ಎಂದು ತಿಳಿಸಿದರು.
ಜೆಡಿಎಸ್ ಮುಖಂಡರಾದ ಅಮರಾವತಿ ಚಂದ್ರಶೇಖರ್, ಪ್ರಕಾಶ್ ಇದ್ದರು.