ಉಂಡೊಟ್ಟೆ ಮುಂದೆ ಇಟ್ಕೊಂಡು ಊಟ ಹಾಕ್ಲಿಲ್ಲ ಅಂದ್ರಂತೆ: ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೀಗ್ಯಾಕಂದ್ರು ಗೊತ್ತಾ?

Puttaraju Criticism Against Chaluvarayaswamy mandya
Published on

ಮಂಡ್ಯ: ಕೆರಗೋಡಿನಲ್ಲಿ ಹನುಮಾನ್ ಧ್ವಜ ತೆರವು ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕುರಿತು ಟೀಕೆ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಜಿಲ್ಲೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೊಡುಗೆ ಏನೆಂದು ಪ್ರಶ್ನಿಸಿದ್ದೀರಿ. ಹಾಗಾದರೆ ಬಹಿರಂಗವಾಗಿ ಚರ್ಚೆ ಮಾಡೋಣ. ಒಂದೆಡೆ ನೀವು, ಇನ್ನೊಂದೆಡೆ ನಾನು ಮುಖಾಮುಖಿಯಾಗಿ ದಾಖಲೆಯೊಂದಿಗೆ ಮಾತನಾಡೋಣ. ನೀವೇ ಸಮಯ ನಿಗದಿ ಮಾಡಿ ಅಥವಾ ನಾವೇ ವೇದಿಕೆ ಸಿದ್ಧಪಡಿಸುತ್ತೇವೆ. ಚರ್ಚೆ ಮಾಡೋಣ ಬನ್ನಿ ಎಂದು ಪಂಥಾಹ್ವಾನ ನೀಡಿದರು.

‘ಉಂಡೊಟ್ಟೆ ಮುಂದೆ ಇಟ್ಟುಕೊಂಡು ಊಟ ಹಾಕ್ಲಿಲ್ಲ’ ಎನ್ನುವ ಮಾತಿನಂತಾಗಿದೆ ಸಚಿವ ಚಲುವರಾಯಸ್ವಾಮಿ ಅವರ ಮಾತು. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಜಿಲ್ಲೆಯ ನೀರಾವರಿ, ವಿದ್ಯುತ್, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ನೀಡುವ ಮೂಲಕ ಜಿಲ್ಲೆಯ ಜನರ ಮನ ಗೆದ್ದಿದ್ದಾರೆ. ಇಷ್ಟಾದರೂ ಅವರ ಕೊಡುಗೆ ಏನೂ ಇಲ್ಲ ಹೇಗೆ ಹೇಳುತ್ತೀರಿ ಎಂದು ಪ್ರಶ್ನಿಸಿದ ಸಿ.ಎಸ್.ಪುಟ್ಟರಾಜು, ಹೇಮಾವತಿ ನದಿ ನೀರನ್ನು ಕೆ.ಆರ್.ಪೇಟೆ, ಪಾಂಡವಪುರ, ನಾಗಮಂಗಲ ಕ್ಷೇತ್ರಗಳಿಗೆ ಎಚ್.ಡಿ.ದೇವೇಗೌಡರು ನೀಡದಿದ್ದರೆ ಜಿಲ್ಲೆಯ ಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಲು ಅಸಾಧ್ಯ. ನಾನು ಮತ್ತು ನೀವು ಜಿಲ್ಲಾ ಪಂಚಾಯಿತಿ ಸದಸ್ಯ, ಶಾಸಕ, ಸಂಸದ, ಸಚಿವರಾಗಿ ಕೆಲಸ ಮಾಡಲು ಎಚ್.ಡಿ.ದೇವೇಗೌಡರೇ ಕಾರಣ. ಹೀಗಿದ್ದರೂ ಅವರ ವಿರುದ್ಧವೇ ಮಾತನಾಡುವುದು ಸರಿಯಲ್ಲ. ಇಷ್ಟೆಲ್ಲ ಉಪಯೋಗ ಪಡೆದು ಅವರ ವಿರುದ್ಧವೇ ಮಾತನಾಡುತ್ತೀರಾ?. ಜಿಲ್ಲೆಯ ಜನ ಸೂಕ್ಷ್ಮಮತಿಗಳು. ನಿಮಗೂ-ನಮಗೂ ಪಾಠ ಕಲಿಸಿದ್ದಾರೆ. ಇದನ್ನು ಅರಿತು ಒಳ್ಳೆಯ ದಾರಿಯಲ್ಲಿ ರಾಜಕೀಯ ಮಾಡುವಂತೆ ಸಲಹೆ ನೀಡಿದರು.

ನಿಮ್ಮಿಂದಲೇ ಎಚ್‌ಡಿಡಿ ಆರೋಗ್ಯ ಕೆಟ್ಟಿದ್ದು

ಎಚ್.ಡಿ.ದೇವೇಗೌಡರಿಗೆ ಆರೋಗ್ಯ ಕೆಟ್ಟಿದ್ದು ನಿಮ್ಮಿಂದ. ಇದಕ್ಕೆ ನಾನೇ ಸಾಕ್ಷಿ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಟೀಕಿಸಿದರು. 2006ರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಧರ್ಮಸಿಂಗ್ ಅವರ ಅವಧಿಯಲ್ಲಿ ಸಚಿವರಾಗಿದ್ದ ನೀವು ಹಾಗೂ ನಿಮ್ಮ ಸ್ನೇಹಿತ ಜಮೀರ್ ಅಹ್ಮದ್ ಇಬ್ಬರೂ ಸೇರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆಂದು ತಿಳಿದು, ಅವರನ್ನು ಜೆಡಿಎಸ್‌ನಿಂದ ಹೊರಹಾಕಲು ಸಂಚು ಮಾಡಿದ್ದೀರಿ. ಆ ಸಮಯದಿಂದಲೇ ಎಚ್.ಡಿ.ದೇವೇಗೌಡರ ಆರೋಗ್ಯ ಕೆಟ್ಟಿತು. ಇದನ್ನು ಅರಿತರೆ ಒಳ್ಳೆಯದು. ಜಿಲ್ಲೆಯ ಐಕ್ಯತೆ, ಅಭಿವೃದ್ಧಿ ವಿಚಾರದಲ್ಲಿ ಜನತಾ ಪರಿವಾರ ನಡಕಟ್ಟಿ, ತೊಡೆತಟ್ಟಿ ನಿಂತಿದೆ. ನಾವು ಜಿಲ್ಲೆಯಲ್ಲಿ ಶಾಂತಿ ಬಯಸುವವರು. ಜನರ ಮನಸು ಮತ್ತು ಹೃದಯ ಮಿಡಿತ ಅರಿತಿರುವ ನಾವು ಅವರೊಂದಿಗೆ ಎಂದಿಗೂ ನಿಲ್ಲುತ್ತೇವೆ ಎಂದ ಅವರು, ಪಾದಯಾತ್ರೆಯೊಂದಿಗೆ ಜೆಡಿಎಸ್‌ನ ಉದ್ಭವಯಾತ್ರೆ ನಡೆಯಿತೇ ಹೊರತು ಅಂತಿಮಯಾತ್ರೆಯಲ್ಲ. ಜೆಡಿಎಸ್ ಮತ್ತು ಬಿಜೆಪಿ ಸೇರಿ ಕಾಂಗ್ರೆಸ್ ಅನ್ನು ನುಂಗುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net