ಸಾಮೂಹಿಕ ವಿವಾಹಕ್ಕೆ ಉಚಿತವಾಗಿ ನೋಂದಣಿ ಪ್ರಾರಂಭ
ಗದಗ: ಪಂಡಿತ ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವ ಅಂಗವಾಗಿ ದಿ. ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ವತಿಯಿಂದ ಪ್ರತಿವರ್ಷ ಕುಂಭ ಮೆರವಣಿಗೆ ಹಾಗೂ ಉಚಿತ ಸಾಮೂಹಿಕ ವಿವಾಹ ನೆರವೇರಿಸಿಕೊಂಡು ಬರಲಾಗುತ್ತಿದ್ದು, ಪ್ರಸಕ್ತ ವರ್ಷವೂ ಕುಂಭ ಮೆರವಣಿಗೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿಮಾನಿ ಬಳಗದ ಅಧ್ಯಕ್ಷ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಪೀರಸಾಬ ಕೌತಾಳ ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ವತಿಯಿಂದ ಕಳೆದ 11 ವರ್ಷಗಳಿಂದ ಪಂಡಿತ ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವ ಹಾಗೂ ಕಳೆದ 6 ವರ್ಷಗಳಿಂದ ಕುಂಭ ಮೆರವಣಿಗೆ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ.
ಪ್ರಸಕ್ತ ವರ್ಷವೂ ರಸಮಂಜರಿ, ಕುಂಭ ಮೆರವಣಿಗೆ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನೋಂದಣಿ ಪ್ರಕ್ರಿಯೆಯೂ ಆರಂಭವಾಗಿದೆ. ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗಲು ಇಚ್ಛಿಸುವ ಹಿಂದು, ಮುಸ್ಲಿಂ ಸೇರಿ ಇತರೆ ಧರ್ಮದವರೂ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ವಧು-ವರರಿಗೆ ಬಟ್ಟೆ, ಮಾಂಗಲ್ಯ ಸರ ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.
ಕಳೆದ 6 ವರ್ಷಗಳಿಂದ ನೆರವೇರಿಸಿಕೊಂಡು ಬರಲಾಗುತ್ತಿರುವ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಪ್ರತಿವರ್ಷ 35ರಿಂದ 40 ಜೋಡಿಗಳು ದಂಪತಿಗಳಾಗಿದ್ದಾರೆ. ಕಳೆದ ವರ್ಷ 34 ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದ್ದರು. ಪ್ರಸಕ್ತ ವರ್ಷ 50ಕ್ಕೂ ಹೆಚ್ಚು ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಭಾಗಿಯಾಗುವರು ಎಂಬುದಾಗಿ ಅಂದಾಜಿಸಲಾಗಿದೆ. ಅಲ್ಲದೇ, ಪ್ರಸಕ್ತ ವರ್ಷ 1,012 ಕುಂಭಗಳೊAದಿಗೆ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಮಾ. 2ರಂದು ಸಂಜೆ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾತ್ರಿಯಿಡಿ ರಸಮಂಜರಿ ಕಾರ್ಯಕ್ರಮ ಜರುಗಿಸುವ ಯೋಜನೆಯದ್ದು, ಅವಳಿ ನಗರದ ಎಲ್ಲ ಕಲಾವಿದರಿಗೂ ಭಾಗವಹಿಸಿ ತಮ್ಮ ಕಲೆಯನ್ನು ಪ್ರದಶಿಋಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಮಾತನಾಡಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಪೀರಸಾಬ ಕೌತಾಳ ಅವರು ದಿ. ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ವತಿಯಿಂದ ಪಂಡಿತ ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವ, ಕುಂಭಮೆರವಣಿಗೆ, ಸಾಮೂಹಿಕ ವಿವಾಹ, ರಸಮಂಜರಿ ಕಾರ್ಯಕ್ರಮಗಳನ್ನು
ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಬರುತ್ತಿದ್ದು, ಖರ್ಚು ವೆಚ್ಚವನ್ನು ತಾವೇ ನೋಡಿಕೊಳ್ಳುತ್ತ ಬಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಬಣ್ಣಿಸಿದರು.
ಸುದ್ದಿಗೋಷ್ಠಿಯಲ್ಲಿ ಆನಂದ ಸಾಲಿಗ್ರಾಮ, ವಿನೋದ ಶಿದ್ಲಿಂಗ್, ರಮೇಶ ಮುಳಗುಂದ ಸೇರಿ ಇತರರು ಹಾಜರಿದ್ದರು.
ಸಾಮೂಹಿಕ ವಿವಾಹ ನೋಂದಣಿಗೆ ಫೆ. 20 ಕೊನೆಯ ದಿನ
ಪಂಡಿತ ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವ ಅಂಗವಾಗಿ ದಿ. ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿರುವ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಹೆಸರನ್ನು ನೋಂದಾಯಿಸುವವರು ಆಧಾರ್ ಕಾರ್ಡ, ಫೋಟೊ ಸಹಿತ ದಾಖಲಾತಿಗಳೊಂದಿಗೆ ಫೆ. 20ರೊಳಗಾಗಿ ನೋಂದಣಿ ಮಾಡಿಸಬಹುದು. ಉಚಿತ ನೋಂದಣಿ ಹಾಗೂ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9945255858, 8310694560, 7996068506 ಸಂಪರ್ಕಿಸಬಹುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಪೀರಸಾಬ ಕೌತಾಳ ಆವರು ಮಾಹಿತಿ ನೀಡಿದರು.