

ನರಗುಂದ: ಅಂಧತ್ವದ ಶಾಪವನ್ನು ಗ್ರಹಿಸಿದ್ದ ಡಾ. ಪಂಡಿತ ಪುಟ್ಟರಾಜ ಗವಾಯಿಗಳು ಸಾವಿರಾರು ಅಂಧ ಅನಾಥ, ಅಂಗವಿಕಲ ಮಕ್ಕಳಿಗೆ ಸ್ವತಂತ್ರವಾಗಿ ಬದುಕು ಸಾಗಿಸಲು ಆತ್ಮವಿಶ್ವಾಸ ತುಂಬಿದ್ದಲ್ಲದೆ ಜೀವನೋಪಾಯಕ್ಕಾಗಿ ಸಂಗೀತ, ಪುರಾಣ, ಪ್ರವಚನದ ಕಲೆಯನ್ನು ಕಲಿಸುತ್ತಿದ್ದರು ಎಂದು ವರ್ತಕ ರಾಘವೇಂದ್ರ ಗುಜಮಾಗಡಿ ಹೇಳಿದರು.
ಪಟ್ಟಣದ ಶ್ರೀಪುಟ್ಟರಾಜ ಸೇವಾ ಸಮಿತಿ, ವರ್ತಕರ ಸಂಘದಿಂದ ರೋಣ ಕ್ರಾಸ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಾನಯೋಗಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳ 13ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪುಟ್ಟರಾಜ ಗವಾಯಿಗಳವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಡಾ. ಪುಟ್ಟರಾಜ ಕವಿ ಗವಾಯಿಗಳಿಗೆ ಕೀರ್ತಿ, ಹಣ ಯಾವುದೂ ಬೇಕಾಗಿರಲಿಲ್ಲ. ಸಮಾಜದಲ್ಲಿ ತಮ್ಮಂತೆ ಅಸಹಾಯಕ ಸ್ಥಿತಿಯಲ್ಲಿರುವ ಲಕ್ಷಾಂತರ ಜನ ಅಂಗವಿಕಲರಿಗೆ ತಾವು ಸಂಪಾದಿಸಿದ ಸಂಗೀತದ ವಿದ್ಯಾಭ್ಯಾಸವನ್ನು ಧಾರೆಎರೆದರು. ಶ್ರೇಷ್ಠ ಸಂಗೀತ ಗುರುಗಳಾಗಿ, ಲಿಂಗ ಪೂಜೆಯಿಂದ ವಿಶೇಷವಾದ ಆಧ್ಯಾತ್ಮಿಕ ಶಕ್ತಿ ಮೈಗೂಡಿಸಿಕೊಂಡು ಸರ್ವಸಂಗ ಪರಿತ್ಯಾಗಿಗಳಾಗಿದ್ದರು ಎಂದು ತಿಳಿಸಿದರು.
ಚನ್ನು ನಂದಿ ಮಾತನಾಡಿ, ಬಂಗಾರದ ಆಭರಣ, ಉಡುಗೆ, ಊಟದ ವಿಷಯಗಳಲ್ಲಿ ಪುಟ್ಟರಾಜರು ಎಂದಿಗೂ ವ್ಯಾಮೋಹಿಗಳಾಗಿರಲಿಲ್ಲ. ಭಕ್ತರ ಸಂತಸದಲ್ಲಿ ಆತ್ಮತೃಪ್ತಿಯನ್ನು ಕಾಣುತ್ತಿದ್ದರು. ವ್ಯಕ್ತಿಯ ಮೇಲೆ ಗೋಚರಿಸುವ ವ್ಯಕ್ತಿತ್ವದ ಆಳವನ್ನು ಅಳಿಯುವುದು ಅಸಾಧ್ಯ ಎಂಬುವುದಕ್ಕೆ ಪುಟ್ಟರಾಜರೇ ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿದರು. ರೋಣ ಕ್ರಾಸ್ ಹಾಗೂ ಪಟ್ಟಣದ ಗಾಂಧಿ ವರ್ತುದಲ್ಲಿ ಅನ್ನ ಸಂತರ್ಪಣೆ ಜರುಗಿತು. ಸಂಗಣ್ಣ ಗೊವೇಶ್ವರ, ವಾಸುರಡ್ಡಿ ಹೆಬ್ಬಾಳ, ಡಾ. ಹೇಮಂತಕುಮಾರ ಹಿರೇಹಾಳ, ಕಲ್ಲನಗೌಡ್ರ, ಬಸವರಾಜ ಶೆಟ್ಟಿಕೇರಿ, ಅಶೋಕ ಅಸೂಟಿ, ಶಂಕ್ರಣ್ಣ ವಾಳದ, ಬಿ.ಕೆ. ಗುಜಮಾಗಡಿ, ಸುನೀಲ ಶೆಲ್ಲಿಕೇರಿ, ಮಂಜುನಾಥ ಆನೇಗುಂದಿ, ಸುರೇಶ ಜೈನ್, ಮಹಾಬಲೇಶ ತಮ್ಮನಗೌಡ್ರ, ಜಯಪ್ರಕಾಶ ಕಂಠಿ, ಮುತ್ತು ವಡ್ಡಿಗೇರಿ ಉಪಸ್ಥಿತರಿದ್ದರು.