

ಮಂಗಳೂರು: ಭಾವಿ ಪರ್ಯಾಯ ಪೀಠಾಧಿಪತಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥರ ಚತುರ್ಥ ಪರ್ಯಾಯದ ಮಹತ್ವಪೂರ್ಣ ಯೋಜನೆ ಕೋಟಿ ಗೀತಾ ಲೇಖನ ಯಜ್ಞದ ಕಾರ್ಯಾಲಯ ನಗರದ ಕಲ್ಕೂರ ಪ್ರತಿಷ್ಠಾನದ ಕಚೇರಿಯಲ್ಲಿ ಮಂಗಳವಾರ ಉದ್ಘಾಟಿಸಲಾಯಿತು.
ಶರವು ದೇವಳದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಕಾರ್ಯಾಲಯ ಉದ್ಘಾಟಿಸಿ, ಮಂಜೇಶ್ವರ ಮದನಂತೇಶ್ವರ ದೇವ ದೇವಳದ ಆಡಳಿತ ಮೊಕ್ತೇಸರ್ ತೋನ್ಸೆ ಗಣಪತಿಯವರಿಗೆ ‘ಗೀತಾ ಲೇಖನ’ ದ ಪುಸ್ತಕವನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಭಗವದ್ಗೀತೆಯ ಮಹತ್ವ ಹಾಗೂ ಶ್ರೀ ಸುಗುಣೇಂದ್ರ ತೀರ್ಥರ ದೂರದರ್ಶಿತ್ವ, ಆಧ್ಯಾತ್ಮಿಕ ಸಾಧನೆಯನ್ನು ವಿವರಿಸಿ ಲೋಕ ಕಲ್ಯಾಣ ಮತ್ತು ಆತ್ಮ ವರ್ಚಸ್ಸಿಗಾಗಿ ಅವರು ಹಮ್ಮಿಕೊಂಡಿರುವ ಕೋಟಿ ಗೀತಾ ಲೇಖನ ಯಜ್ಞವನ್ನು ಯಶಸ್ಸಿಗೊಳಿಸಿ ಶ್ರೀ ಕೃಷ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದರು.
ಕಾರ್ಯಾಲಯ ವು ಕಲ್ಕೂರ ಪ್ರತಿಷ್ಠಾನದ ಕಚೇರಿಯಲ್ಲಿ ಬೆಳಗ್ಗೆ10ರಿಂದ ಸಂಜೆ 5ರ ತನಕ ತೆರೆದಿರುತ್ತದೆ.
ಯೋಜನೆಯ ಯಶಸ್ಸಿಗೆ ಶ್ರಮಿಸುತ್ತಿರುವ ಕೆ.ವಿ.ರಮಣ್, ಆಧ್ಯಾತ್ಮಿಕ ಚಿಂತಕ ಹರಿಕೃಷ್ಣ ಪುನರೂರು,ಪ್ರೊ.ಎಂ.ಬಿ.ಪುರಾಣಿಕ್, ನಿತ್ಯಾನಂದ ಕಾರಂತ ಪೊಳಲಿ, ರಾಘವೇಂದ್ರ ಎಚ್.ವಿ., ಜನಾರ್ದನ ಹಂದೆ, ವಿಜಯಲಕ್ಷ್ಮೀ ಬಿ.ಶೆಟ್ಟಿ, ಲೀಲಾಕ್ಷ ಕರ್ಕೇರ, ಸುಧಾಕರ ರಾವ್ ಪೇಜಾವರ, ಸುಮಿತ್ರಾ ಜಿ.ಆಚಾರ್ಯ, ವಂದನಾ ಸುರೇಶ್, ಕಾತ್ಯಾಯಿನಿ ರಾವ್, ಶ್ರೀರಾಮ ಎಸ್.ಆರ್., ರಾಮಕೃಷ್ಣ ರಾವ್, ಚಂದ್ರಶೇಖರ ಮಯ್ಯ, ಶಶಿಪ್ರಭಾ ಐತಾಳ್, ಜ್ಯೋತಿ ಕೃಷ್ಣಾನಂದ, ಲಲಿತಾ ಪೈ , ಎಚ್.ಆರ್, ಗೀತಾ ಆಚಾರ್ ಮೊದಲಾದವರು ಉಪಸ್ಥಿತರಿದ್ದರು. ಪೂರ್ಣಿಮಾ ರಾವ್ ಪೇಜಾವರ ವಂದಿಸಿದರು.