ಸರ್ಕಾರಿ ಕಚೇರಿಗಳಲ್ಲಿ ಲೋಕಾಯುಕ್ತ ಮಾಹಿತಿ ಫಲಕ ಹಾಕಿ

16 srs 1
Published on

ಶಿರಸಿ: ಸರ್ಕಾರಿ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಮಾಹಿತಿ ಹಾಗೂ ಫೋನ್ ನಂಬರ್ ಕಡ್ಡಾಯವಾಗಿ ಹಾಕಿರಬೇಕು ಎಂದು ಲೋಕಾಯುಕ್ತ ಎಸ್​ಪಿ ಕುಮಾರಚಂದ್ರ ಹೇಳಿದರು.

ನಗರದ ಮಿನಿ ವಿಧಾನಸೌಧದಲ್ಲಿ ಗುರುವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ನಗರದ ಸರ್ಕಾರಿ ಕಚೇರಿಗಳಲ್ಲಿ ಲೋಕಾಯುಕ್ತ ವಿವರದ ಫಲಕಗಳ ಹಾಕಬೇಕಿದ್ದರೂ, ಹಲವು ಕಚೇರಿಗಳಲ್ಲಿ ಹಾಕಿಲ್ಲ. ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಪ್ರದರ್ಶನವಾಗುವ ಮಾದರಿಯಲ್ಲಿ ಫಲಕ ಅಳವಡಿಸಬೇಕು ಎಂದು ಸೂಚಿಸಿದರು.

ಸಾರ್ವಜನಿಕರು ಕಚೇರಿಗಳಿಗೆ ಭೇಟಿ ನೀಡಿದಾಗ ಅವರನ್ನು ಗೌರವಯುತವಾಗಿ ಕಾಣಬೇಕು, ವಿನಾಕಾರಣ ಅಲೆದಾಡಿಸಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಮಹಿಳೆಯೊಬ್ಬರು ಹೆಸ್ಕಾಂ ಕುರಿತು ದೂರು ನೀಡಿದಾಗ ಅಧಿಕಾರಿ ಇಲ್ಲದಿರುವುದನ್ನು ಆಕ್ಷೇಪಿಸಿದ ಎಸ್​ಪಿ ಅವರು, ತಕ್ಷಣ ಅವರನ್ನು ದೂರವಾಣಿ ಮೂಲಕ ಸಭೆಗೆ ಕರೆಸಿ, ಒಂದು ವಾರದೊಳಗೆ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.

ದಾಸನಕೊಪ್ಪದ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿ 3 ವರ್ಷವಾದರೂ ಸರ್ವೆ ಮಾಡಿಕೊಡದಿರುವ ಕುರಿತಂತೆ ಲೋಕಾಯುಕ್ತ ಗಮನಕ್ಕೆ ತಂದರು. ತಕ್ಷಣ ಸರ್ವೆ ಮಾಡುವಂತೆ ಆದೇಶಿಸಲಾಯಿತು. ಜನರೊಂದಿಗೆ ಬೇಜವಾಬ್ದಾರಿಯಿಂದ ವರ್ತಿಸುವ ಹಾಗೂ ಅಕ್ರಮಗಳ ಕುರಿತು ದೂರು ಬಂದರೆ ಯಾವುದೇ ಮಾಹಿತಿ ನೀಡದೆ ಕ್ರಮ ಕೈಗೊಳ್ಳುವುದಾಗಿ ಎಸ್​ಪಿ ಎಚ್ಚರಿಕೆ ನೀಡಿದರು. ತಹಸೀಲ್ದಾರ್ ಶ್ರೀಧರ ಮುಂದಲಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net