

ಬಂಗಾರಪೇಟೆ: ರೈತರ ಕೃಷಿ ಜಮೀನು ಕೈಗಾರಿಕಾ ಅಭಿವೃದ್ಧಿಗೆ ಮಾರಾಟಕ್ಕಿಲ್ಲ ಎಂದು ಪ್ರತಿ ಹಳ್ಳಿಯಲ್ಲೂ ನಾಮಫಲಕ ಅಳವಡಿಸುವ ಜತೆಗೆ ಬಲವಂತದ ಭೂಸ್ವಾಧಿನಕ್ಕೆ ಬರುವ ಅಧಿಕಾರಿಗಳ ವಿರುದ್ಧ ರೈತ ಮಹಿಳೆಯರು ಕೃಷಿಭೂಮಿ ಉಳಿವಿಗಾಗಿ ದಂಗೆ ಏಳಬೇಕು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಸಲಹೆ ನೀಡಿದರು.
ತಾಲೂಕಿನ ಪ್ರಗತಿಪರ ರೈತ ಮರಗಲ್ ಶ್ರೀನಿವಾಸ್ ತೋಟದಲ್ಲಿ ಹಮ್ಮಿಕೊಂಡಿದ್ದ 45ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, 80ರ ದಶಕದಲ್ಲಿ ನರಗುಂದ. ನವಲಗುಂದ ತಾಲೂಕು ಕಚೇರಿ ಮುಂದೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಾಂತಿಯುತ ಹೋರಾಟ ಮಾಡುತ್ತಿದ್ದ ಅನ್ನದಾತರ ಮೇಲೆ ಅಂದಿನ ಗುಂಡೂರಾವ್ ಸರ್ಕಾರ ತಹಸೀಲ್ದಾರ್ ಅವರ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದರು ಎಂಬ ನೆಪದಲ್ಲಿ ಪೊಲೀಸರ ಮುಖಾಂತರ ಹೋರಾಟಗಾರರ ಮೇಲೆ ಗೋಲಿಬಾರ್ ಮಾಡಿ ಅನ್ನದಾತರನ್ನು ಕೊಂದರು. ಅಂದಿನ ಸರ್ಕಾರದ ವಿರುದ್ಧ ಗುಡುಗಿದ ರೈತರು ಗುಂಡೂರಾವ್ ಸರ್ಕಾರವನ್ನೇ ಪತನಗೊಳಿಸಿದ ಇತಿಹಾಸ ಮರೆಯಬಾರದು. ರೈತ ಸಂಘ ಅಂದಿನಿಂದ ಇಂದಿನವರೆಗೂ ರೈತ ವಿರೋದಿ ಸರ್ಕಾರಗಳ ವಿರುದ್ಧ ಹೋರಾಟ ರೂಪಿಸುವ ಮುಖಾಂತರ ನೊಂದ ರೈತರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಹೋರಾಟವಾಗಿದೆ ಎಂದರು.
ಪ್ರಗತಿಪರ ರೈತ ಮರಗಲ್ ಶ್ರೀನಿವಾಸ ಮಾತನಾಡಿ, ಕೆಸಿ ವ್ಯಾಲಿ 3ನೇ ಹಂತದ ಶುದ್ಧೀಕರಣ ಮಾಡಬೇಕು. ನಕಲಿ ಬಿತ್ತನೆ ಬೀಜ, ಕೀಟ ನಾಶಕ ನಿಯಂತ್ರಣಕ್ಕೆ ಪ್ರಬಲ ಕಾನೂನು ಜಾರಿ ಮಾಡಬೇಕು. ಮೂರು ರೈತ ವಿರೋದಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು. ಮಾವು ಬೆಳೆಗಾರರ ರಕ್ಷಣೆಗೆ ಕೃಷಿ ಆಧಾರಿತ ಹಾಗೂ ಮಾವು ಸಂಸ್ಕರಣ ಘಟಕಗಳನ್ನು ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು.