

ಹನೂರು: ಕಾಡುಗಳ್ಳ ವೀರಪ್ಪನ್‌ನಿಂದ ಹತ್ಯೆಯಾದ ದಕ್ಷ ಅಧಿಕಾರಿ ಪಿ.ಶ್ರೀನಿವಾಸ್ ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವುದರ ಮೂಲಕ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಸಿಸಿಎಫ್ ಮನೋಜ್‌ಕುಮಾರ್ ತಿಳಿಸಿದರು.
ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ವಿಭಾಗದ ವತಿಯಿಂದ ಅರಣ್ಯ ಹುತಾತ್ಮರ ದಿನದ ಅಂಗವಾಗಿ ಪಿ.ಶ್ರೀನಿವಾಸ್ ಹತ್ಯೆಯಾದ ಸ್ಥಳ ಗೋಪಿನಾಥಂ ಬಳಿಯ ಎರಿಕೆಯಮ್ ಹಳ್ಳದ ಬಳಿ ನಿರ್ಮಿಸಿರುವ ಅವರ ಸ್ಮಾರಕಕ್ಕೆ ಶುಕ್ರವಾರ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಅರಣ್ಯ ಇಲಾಖೆಯ ದಕ್ಷ ಅಧಿಕಾರಿ ಪಿ.ಶ್ರೀನಿವಾಸ್ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದ್ದರು. ತಮ್ಮ ಅಧಿಕಾರವಧಿಯಲ್ಲಿ ಕಾಡುಗಳ್ಳ ವೀರಪ್ಪನ್ ವಿರುದ್ಧ ಹೋರಾಡುವ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಇವರು ಇಲಾಖೆಗೆ ಉತ್ತಮ ಸೇವೆ ಸಲ್ಲಿಸಿ ಇತರರಿಗೆ ಮಾದರಿಯಾಗಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಇವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಅರಣ್ಯ ರಕ್ಷಣೆಗೆ ಕಾಳಜಿ ವಹಿಸಬೇಕು ಎಂದರು.
ಡಿಎಫ್‌ಒ ಏಡುಕುಂಡಲು ಮಾತನಾಡಿ, ಪಿ.ಶ್ರೀನಿವಾಸ್ ಅವರು ಕಾಡುಗಳ್ಳ ವೀರಪ್ಪನ್‌ನಿಂದ ಹತ್ಯೆಯಾದದ್ದು ದುರದೃಷ್ಟಕರ. ಅವರು ಇಲಾಖೆಯ ಅಧಿಕಾರಿಗಳಿಗೆ ಇಂದಿಗೂ ಸ್ಫೂರ್ತಿಯಾಗಿದ್ದಾರೆ. ಅರಣ್ಯಗಳು ದೇಶದ ಸಂಪನ್ಮೂಲ. ಆದ್ದರಿಂದ ಅವುಗಳ ರಕ್ಷಣೆ ನಮ್ಮೆಲ್ಲರ ಪ್ರಮುಖ ಜವಾಬ್ದಾರಿ. ಸಾರ್ವಜನಿಕರು ಅರಣ್ಯ ರಕ್ಷಣೆಗೆ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾವೇರಿ ವನ್ಯಜೀವಿ ವಿಭಾಗದ ಡಿಎಫ್‌ಒ ರಮೇಶ್, ನಿವೃತ್ತ ಎಸಿಎಫ್ ವಾಸುದೇವಮೂರ್ತಿ, ಆರ್‌ಎಫ್‌ಒ, ಡಿಆರ್‌ಎಫ್‌ಒ ಹಾಗೂ ಅರಣ್ಯ ಇಲಾಖೆಯ ನೌಕರರು ಹಾಜರಿದ್ದರು.