

ಹಳಿಯಾಳ: ಕ್ಷೇತ್ರದಲ್ಲಿ ಹೆಚ್ಚಾಗಿರುವ ಮತ್ತು ಕಾನೂನು ಉಲ್ಲಂಘಿಸಿ ನಡೆಸಲಾಗುತ್ತಿರುವ ಮೀಟರ್ ಬಡ್ಡಿ ಮಾಫಿಯಾ ಹಾಗೂ ಮೈಕ್ರೋಫೈನಾನ್ಸ್ ವ್ಯವಹಾರಗಳ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳುವಂತೆ ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆಗೆ ಶಾಸಕ ಆರ್.ವಿ. ದೇಶಪಾಂಡೆ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಶುಕ್ರವಾರ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕರು ಈ ಕುರಿತು ಚರ್ಚಿಸಿದರು.
ಅಂಬಿಕಾನಗರದಿಂದ ಹಳಿಯಾಳಕ್ಕೆ ಬಂದಿರುವ ಮಾದರಿ ಗುನ್ನೆಗಾರ(ಎಂಒಬಿ)ನಾಗಿರುವ ರಾಕೇಶ ವಾಲೇಕರ ಹಾಗೂ ಆತನ ಸಂಗಡಿಗರಿಂದ ನಡೆಯುತ್ತಿರುವ ಅಕ್ರಮ ಬಡ್ಡಿ ವ್ಯವಹಾರ ಹಾಗೂ ಇನ್ನಿತರ ಫೈನಾನ್ಸ್ ಕಂಪನಿಗಳ ಕಿರುಕುಳದ ಬಗ್ಗೆ ದೂರುಗಳು ಸಭೆಯಲ್ಲಿ ಕೇಳಿ ಬಂದವು. ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ತಹಸೀಲ್ದಾರ್ ಪ್ರವೀಣ ಹುಚ್ಚನ್ನವರ ಅವರಿಗೆ ಶಾಸಕರು ಸೂಚಿಸಿದರು.
ಹಳಿಯಾಳ ಕ್ಷೇತ್ರದಲ್ಲಿ ಬಡ್ಡಿ ವ್ಯವಹಾರ ನಡೆಸುವವರ ಹಾವಳಿ ಹೆಚ್ಚಾಗಿದೆ. ಸಾಲದ ಹತ್ತು ಪಟ್ಟು ಹಣ ವಸೂಲಿ ಮಾಡುತ್ತಿರುವ ದೂರು ಕೇಳಿಬರುತ್ತಿದ್ದು, ಇದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ಕಾನೂನು ಬಾಹಿರ ಕೃತ್ಯ ಸಹಿಸುವುದಿಲ್ಲ. ಮೈಕ್ರೋ ಫೈನಾನ್ಸ್ ಹಾಗೂ ಬಡ್ಡಿ ಮಾಫಿಯಾದವರಿಂದ ಕಿರುಕುಳ ಉಂಟಾಗುತ್ತಿದ್ದರೆ ಸ್ಥಳೀಯ ತಾಲೂಕು ಆಡಳಿತ ಕಚೇರಿ ಹಾಗೂ ಪೊಲೀಸ್ ಠಾಣೆಗೆ ದೂರು ಸಲ್ಲಿಸುವಂತೆ ಸಲಹೆ ನೀಡಿದರು.
ಇಂತಹ ಕಿರುಕುಳ ಘಟನೆಗಳ ಬಗ್ಗೆ ಜನಪ್ರತಿನಿಧಿಗಳು ಜಾಗೃತಿ ಮೂಡಿಸಬೇಕು. ನೊಂದವರಿಗೆ ಹೆಗಲಾಗಿ ನಿಲ್ಲಬೇಕು ಮತ್ತು ನ್ಯಾಯ ದೊರಕಿಸಲು ಪ್ರಯತ್ನಿಸಬೇಕು. ಕ್ಷೇತ್ರದಲ್ಲಿ ಯಾರೇ ಆಗಲಿ ಅಕ್ರಮ ವ್ಯವಹಾರಗಳನ್ನು ನಡೆಸುತ್ತಿದ್ದರೆ ಕೂಡಲೇ ದೂರು ನೀಡುವಂತೆ ತಿಳಿಸಿದ ಶಾಸಕರು ದೂರುದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.
ಸಭೆಗೆ ಹಾಜರಾಗದ ಸಹಕಾರಿ ಸಂಘದ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಸಜ್ಜನ ಅವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲು ಆದೇಶಿಸಿದರು.
ಸಭೆಯಲ್ಲಿ ತಾಲೂಕಾಸ್ಪತ್ರೆಗಳಲ್ಲಿ ಔಷಧ ಕೊರತೆ ಆಗದಂತೆ ನೊಡಿಕೊಳ್ಳಲು ವೈದ್ಯಾಧಿಕಾರಿ ಡಾ.ಅನಿಲಕುಮಾರ್ ಅವರಿಗೆ ಸೂಚಿಸಿದರು.
ಶಾಲಾ ಮಕ್ಕಳ ವಸತಿ ನಿಲಯಗಳ ಬಗ್ಗೆ ಪ್ರಗತಿ ಪರಿಶೀಲಿಸಿದ ಶಾಸಕರು, ವಸತಿ ನಿಲಯಗಳಲ್ಲಿ ಗುಣಮಟ್ಟದ ಹಾಗೂ ಸರಿಯಾಗಿ ಆಹಾರ ನೀಡಲಾಗುತ್ತಿಲ್ಲ, ಸ್ವಚ್ಛತೆ ಇಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ನಾನು ಹಠಾತ್ ಭೇಟಿ ನೀಡಿದಾಗ ತಪ್ಪುಗಳು ಕಂಡು ಬಂದರೆ, ತಪ್ಪು ಮಾಡಿ ಅಧಿಕಾರಿಗಳು ಸಿಕ್ಕಿ ಬಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ಉಪವಿಭಾಗಾಧಿಕಾರಿ ಕನಿಷ್ಕ್ , ತಾಪಂ ಆಡಳಿತಾಧಿಕಾರಿ ಎಂ. ನಾಗರಾಜ, ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ ಇದ್ದರು.
ಅಹವಾಲು ಸಲ್ಲಿಕೆ
ಸಭೆಗೂ ಮುನ್ನ ಗ್ರಾಮೀಣ ಭಾಗಗಳಾದ ಅಡಕೆ ಹೊಸೂರು, ತಟ್ಟಿಗೇರಾ, ತತ್ವಣಗಿ, ಬಿಕೆ ಹಳ್ಳಿ , ಕಾಳಗಿನಕೊಪ್ಪ, ಮುರ್ಕವಾಡ ಮತ್ತಿತರ ಗ್ರಾಮಗಳ ಹಾಗೂ ಅರಣ್ಯದಂಚಿನ ಬುಡಕಟ್ಟು ಸಿದ್ದಿ ಸಮುದಾಯದ ಮಹಿಳೆಯರು ಮೈಕ್ರೋಫೈನಾನ್ಸ್ ಹಾಗೂ ಬಡ್ಡಿ ವ್ಯವಹಾರದ ಕಿರುಕುಳದ ಬಗ್ಗೆ ಶಾಸಕರಿಗೆ ಅಹವಾಲು ಸಲ್ಲಿಸಿದರು.