ಅಡಕೆ ಅಕ್ರಮ ಆಮದು ತಡೆಗೆ ಕಡಿವಾಣ ಹಾಕಿ

nrp areca
ದೆಹಲಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈಗೆ ರಾಜ್ಯ ಅಡಕೆ ಮಾರಾಟ ಸಹಕಾರ ಸಂಘಗಳ ಮಹಾ ಮಂಡಳದಿಂದ ಮನವಿ ಸಲ್ಲಿಸಲಾಯಿತು. ಯಡಗೆರೆ ಸುಬ್ರಹ್ಮಣ್ಯ, ಎಚ್.ಎಸ್.ಮಂಜಪ್ಪ ಹೊಸಬಾಳೆ, ಇಂದೂಧರ ಗೌಡ, ಶ್ರೀಕಾಂತ್ ಬರುವೆ, ವಿಜಯಾನಂದ ಭಟ್ ಇದ್ದರು.
Published on: 

ಎನ್.ಆರ್.ಪುರ: ಅಕ್ರಮವಾಗಿ ಅಡಕೆ ಆಮದು ಆಗುತ್ತಿರುವುದರಿಂದ ಬೆಲೆಯಲ್ಲಿ ತೀವ್ರ ಇಳಿಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಬೆಳೆಗಾರರಿಗೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಕೇಂದ್ರ ಸರ್ಕಾರ ನಿರ್ಲಕ್ಷೃ ಮಾಡುವುದಿಲ್ಲ. ತಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿ ಅಕ್ರಮ ಆಮದು ನಿರ್ಬಂಧಕ್ಕೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಭರವಸೆ ನೀಡಿದ್ದಾರೆ.

ನವದೆಹಲಿಯಲ್ಲಿ ಸೋಮವಾರ ಸಚಿವರನ್ನು ಭೇಟಿಯಾದ ಅಡಕೆ ಸಹಕಾರ ಸಂಘಗಳ ಮಹಾಮಂಡಳದ ನಿಯೋಗವು ಅಡಕೆಯ ಅಕ್ರಮ ಆಮದು ಕಾರಣದಿಂದ ಆಗಿರುವ ಅನಾಹುತಗಳನ್ನು ಮನವರಿಕೆ ಮಾಡಿಕೊಟ್ಟಿತು.
ನಿಯೋಗದ ನೇತೃತ್ವ ವಹಿಸಿದ್ದ ಕ್ರಾೃಮ್ ಅಧ್ಯಕ್ಷ ಎಚ್.ಎಸ್.ಮಂಜಪ್ಪ ಹೊಸಬಾಳೆ, ಅಡಕೆ ಬೆಳೆಗಾರರ ಸಂಕಷ್ಟಗಳ ಮಾಹಿತಿ ನೀಡಿದರು. ಉತ್ತರಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶೇ.80ರಷ್ಟು ಸಾಂಪ್ರದಾಯಿಕ ಬೆಳೆಗಾರರಿದ್ದಾರೆ. ಇವರೆಲ್ಲ ಸಣ್ಣ ಹಾಗೂ ಮಧ್ಯಮ ವರ್ಗದ ರೈತರು. ಅಡಕೆ ಬೆಲೆ ಕುಸಿತದ ನೇರ ಪರಿಣಾಮ ಈ ಬೆಳೆಗಾರರ ಮೇಲಾಗುತ್ತಿದೆ ಎಂದರು.
ಅಕ್ರಮ ಆಮದಿನಿಂದ ಸರ್ಕಾರಕ್ಕೂ ದೊಡ್ಡ ಪ್ರಮಾಣದ ತೆರಿಗೆ ನಷ್ಟವಾಗುತ್ತಿದೆ. ಅಡಕೆ ಬೆಲೆ ಕುಸಿತದಿಂದ ವ್ಯಾಪಾರಿ ವಲಯದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ತೆರಿಗೆ ಸಂಗ್ರಹದಲ್ಲಿ ಕುಸಿತವಾಗುತ್ತದೆ. ಹೀಗಾಗಿ ಕಾನೂನು ಕ್ರಮಗಳ ಮೂಲಕ ಅಕ್ರಮ ಆಮದು ತಡೆಯಬೇಕೆಂದು ಮನವಿ ಮಾಡಿದರು.
ಅಡಕೆ ಸಹಕಾರ ಸಂಘಗಳ ಮಹಾಮಂಡಳ ಅಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ, ಸಾಗರದ ಆಪ್ಸ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಗೌಡ, ಮ್ಯಾಮ್‌ಕೋಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ, ಶಿರಸಿ ಟಿಎಸ್‌ಎಸ್ ಪ್ರಧಾನ ವ್ಯವಸ್ಥಾಪಕ ವಿಜಯಾನಂದ ಭಟ್ ನಿಯೋಗದಲ್ಲಿದ್ದರು.