ಗ್ಯಾಸ್ ರಿಫಿಲ್ಲಿಂಗ್ ದಂಧೆಗೆ ಕಡಿವಾಣ ಹಾಕಿ; ಅಧಿಕಾರಿಗಳಿಗೆ ಡಿಸಿ ಖಡಕ್ ವಾರ್ನಿಂಗ್

GAS RE FIILLING DC MEETING
ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳ ಸಭೆ ನಡೆಸಿದರು. ಎಸ್‌ಪಿ ಲಕ್ಷ್ಮಣ ನಿಂಬರಗಿ, ಎಸಿ ಗುರುನಾಥ ದಡ್ಡೆ, ವಿನಯಕುಮಾರ ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ಅನಧಿಕೃತವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೃಹ ಬಳಕೆ ಎಲ್ಪಿಜಿ ಗ್ಯಾಸ್ ಅನಧಿಕೃತವಾಗಿ ಆಟೋಗಳಿಗೆ ತುಂಬಲಾಗುತ್ತಿದೆ. ಹೋಟೆಲ್, ಬೀದಿಬದಿ ಆಹಾರ ತಯಾರಿಕೆ ವ್ಯಾಪಾರಸ್ಥರು ಕೂಡ ಬಳಕೆ ಮಾಡುತ್ತಿದ್ದಾರೆ. ಅಲ್ಲದೇ ವಾಣಿಜ್ಯೋದ್ಯಮ ಸಿಲಿಂಡರ್‌ಗಳಿಗೆ ಮರುಭರ್ತಿ ಮಾಡಿ ಮಾರಾಟ ಮಾಡುತ್ತಿರುವುದನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದರು.

ಗ್ಯಾಸ್ ರಿಫಿಲ್ಲಿಂಗ್ ಮಾಡುವಾಗ ಇತ್ತೀಚೆಗೆ 22 ವರ್ಷದ ವ್ಯಕ್ತಿ ಪ್ರಾಣ ಕಳೆದುಕೊಂಡಿರುವ ಕುರಿತು ವಿವರಿಸಿದ ಜಿಲ್ಲಾಧಿಕಾರಿಗಳು, ಆಯಾ ಸಂಬಂಧಿಸಿದ ಇಲಾಖೆಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿನ ಅಧಿಕಾರವನ್ನು ಬಳಸಿ ನಗರದಾದ್ಯಂತ ಅಕ್ರಮವಾಗಿ ಗೃಹಬಳಕೆ ಎಲ್ಪಿಜಿ ಗ್ಯಾಸ್ ರಿಫಿಲ್ಲಿಂಗ್ ಮಾಡಲಾಗುತ್ತಿದೆ. ಅಂಥ ಸ್ಥಳಗಳನ್ನು ಪಾಲಿಕೆ ವತಿಯಿಂದ ತೆರವುಗೊಳಿಸಿ, ಇಂತಹ ಸ್ಥಳಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ನಗರದಲ್ಲಿ 7 ಅಧಿಕೃತ ಗ್ಯಾಸ್ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳು ಸಹ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಿ ಗ್ಯಾಸ್ ವಿತರಣೆಗೆ ಕ್ರಮ ವಹಿಸಬೇಕು. ನಿಯಮಗಳನ್ನು ಪಾಲಿಸದ ಏಜೆನ್ಸಿಗಳ ಮೇಲೆಯೂ ಪ್ರಕರಣ ದಾಖಲಿಸಿ ಲೈಸನ್ಸ್ ರದ್ಧತಿಗೆ ಕ್ರಮ ವಹಿಸಬೇಕು. ನಗರದಲ್ಲಿ ಯಾವ ಯಾವ ಸ್ಥಳಗಳಲ್ಲಿ ಅನಧೀಕೃತ ಗ್ಯಾಸ್ ರಿಫಿಲ್ಲಿಂಗ್ ಮಾಡಲಾಗುತ್ತಿದೆ ಎಂಬುದರ ಕುರಿತು ಪರಿಶೀಲನೆ ನಡೆಸಿ, ಸಮಗ್ರ ಮಾಹಿತಿ ಒದಗಿಸಲು ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸುವಂತೆ ಅವರು ಸೂಚನೆ ನೀಡಿದರು.

ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಗ್ಯಾಸ್ ಏಜೆನ್ಸಿಗಳು ಗ್ರಾಹಕರಿಗೆ ಗ್ಯಾಸ್ ಒದಗಿಸುವಾಗ ನಿಗದಿತ ಗ್ರಾಹಕರಿಗೆ ಗ್ಯಾಸ್ ತಲುಪಿರುವ ಕುರಿತು ಖಾತರಿ ಪಡಿಸಿಕೊಳ್ಳಲು ಮೊಬೈಲ್ ಆಫ್‌ನ ಕ್ಯೂಆರ್ ಕೋಡ್ ಬಳಸಿಕೊಂಡು ಗ್ರಾಹಕರಿಗೆ ಗ್ಯಾಸ್ ವಿತರಿಸಿದ ಕುರಿತು ನಂತರ ಖಾಲಿಯಾದ ಗ್ಯಾಸ್ ಟಾಕಿ ಮರಳಿ ಪಡೆಯುವಾಗ ಅದೇ ಯುನಿಕ್ ನಂಬರ್ ಇರುವುದರ ಕುರಿತು ಮನವರಿಕೆ ಮಾಡಿಕೊಳ್ಳಬೇಕು. ಹೀಗೆ ಮಾಡಿದ್ದಲ್ಲಿ ಏಜೆನ್ಸಿದಾರರು ಕೂಡ ಸುರಕ್ಷತೆ ಪಾಲಿಸಿದಂತಾಗುತ್ತದೆ. ಗ್ರಾಹಕರಿಗೆ ಗ್ಯಾಸ್ ವಿತರಿಸಲು ತಾಂತ್ರಿಕ ವ್ಯವಸ್ಥೆ ಕುರಿತು ಏಜೆನ್ಸಿಯವರಿಗೆ ತಾಂತ್ರಿಕತೆ ಕುರಿತು ಸಮಗ್ರ ಮಾಹಿತಿ ಒದಗಿಸುವಂತೆ ತಿಳಿಸಿದ ಅವರು, ಬರುವ ಜೂನ್ 1 ರಿಂದ ಏಜೆನ್ಸಿ ದಾರರರು ಈ ರೀತಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಎಸ್‌ಪಿ ಲಕ್ಷಣ ನಿಂಬರಗಿ ಮಾತನಾಡಿ, ಅನಧಿಕೃತವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುವವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

ಆಹಾರ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ಮಾತನಾಡಿ, ನಗರದಾದ್ಯಂತ 2024ನೇ ನವೆಂಬರ್ ತಿಂಗಳಿನಿಂದ ಈವರೆಗೆ ಒಟ್ಟು 19 ಪ್ರಕರಣಗಳನ್ನು ದಾಖಲಿಸಿ ಸುಮಾರು 146 ಸಿಲಿಂಡರ್‌ಗಳನ್ನು ಜಫ್ತು ಮಾಡಲಾಗಿದೆ ಎಂದರು.

ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಡಿವೈಎಸ್‌ಪಿ ಬಸವರಾಜ ಯಲಿಗಾರ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮ ಬಾಬಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net