ಪುಸ್ತಕಗಳು ವಿಚಾರಾನುಭವದ ದೀವಿಗೆ: ಯುವ ಬರಹಗಾರರ ಬಳಗದ ಅಧ್ಯಕ್ಷ ಸತೀಶ್ ಜವರೇಗೌಡ ಅಭಿಮತ

08_01_Mdy_01(Pusthaka Habha)
Published on

ಮಂಡ್ಯ: ಲೇಖಕನ ಅನುಭವದ ಜಗತ್ತನ್ನು ತೆರೆದಿಡುವ ಪುಸ್ತಕಗಳು, ವಿಚಾರದ ಬೆಳಕನ್ನು ಬೀರುವ ಅನುಭವದ ದೀವಿಗೆಗಳು. ಇಂತಹ ಪುಸ್ತಕಗಳ ಓದುವ ಹವ್ಯಾಸದಿಂದ ಬಿಡುವಿನ, ಏಕಾಂತದ ಸಮಯದ ಸದ್ಬಳಕೆಗೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.

ನಗರದ ವಿವಿ ರಸ್ತೆಯ 2ನೇ ಕ್ರಾಸ್‌ನಲ್ಲಿರುವ ರೈತಬಂಧು ಮಂಡ್ಯ ಫೌಂಡೇಷನ್ ಕಚೇರಿಯಲ್ಲಿ ಪರಿಚಯ ಪ್ರಕಾಶನದ ನೇತೃತ್ವದಲ್ಲಿ ಇಂಡಿಯನ್ ಕಲ್ಚರಲ್ ಕಲೆಕ್ಟಿವ್, ಜಿಲ್ಲಾ ಯುವ ಬರಹಗಾರರ ಬಳಗ ಹಾಗೂ ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಸಹಯೋಗದೊಂದಿಗೆ ಆಯೋಜಿಸಿರುವ ಮೂರು ದಿನ ಪುಸ್ತಕ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.

ಬುದ್ಧಿ ಮತ್ತು ಭಾವದ ವಿಕಾಸಕ್ಕೆ ಪುಸ್ತಕಗಳ ಒಡನಾಟದ ಅಗತ್ಯವಿದೆ. ವೈಚಾರಿಕತೆಯ ಮನೋಭಾವ ಬೆಳೆಸುವ ಓದಿನ ದಾರಿಗೆ ಜನತೆ ಮರಳಲು ಸೂಕ್ತ ಕಾಲವಿದು. ಮೊದಲು ಟಿವಿ, ಸಿನಿಮಾ ನಮ್ಮ ಬದುಕನ್ನು ಆಕ್ರಮಿಸಿಕೊಂಡಿದ್ದವು. ಈಗ ಸಾಮಾಜಿಕ ಜಾಲತಾಣಗಳು ಆಕ್ರಮಿಸಿಕೊಂಡಿವೆ. ಇದರಿಂದಾಗಿ ಓದುವ ಹವ್ಯಾಸ ಕ್ಷೀಣಿಸಿದೆ ಎಂದು ವಿಷಾದಿಸಿದರು.

ಕನ್ನಡದಲ್ಲಿ ಲೇಖಕರು ಬರೆದ ಅತ್ಯುತ್ತಮ ಪುಸ್ತಕಗಳನ್ನು ಆಸಕ್ತ ಓದುಗರಿಗೆ ವ್ಯವಸ್ಥಿತವಾಗಿ ತಲುಪಿಸುವ ಮಾರಾಟದ ಜಾಲವಿಲ್ಲ. ಈ ಕೊರತೆ ತುಂಬುವ ಸಲುವಾಗಿ ಮೂರು ದಿನಗಳ ಕಾಲ ಪರಿಚಯ ಪ್ರಕಾಶನ ಪುಸ್ತಕ ಹಬ್ಬ ಆಯೋಜಿಸಿದೆ. ಜಿಲ್ಲೆಯ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಶ್ವಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಿ.ಡಿ.ಕಿರಣ್ ಮಾತನಾಡಿ, ದಿಕ್ಕು ತಪ್ಪುತ್ತಿರುವ ಸಮಾಜಕ್ಕೆ ಪುಸ್ತಕಗಳಲ್ಲಿನ ವಿಚಾರಗಳನ್ನು, ಸಂದೇಶಗಳನ್ನು ತಲುಪಿಸುವ ಮೂಲಕ ಜ್ಞಾನ ಬಿತ್ತುವ ಕೆಲಸ ಮಾಡಬೇಕು ಎಂದರು.

ನಾವು ತಲೆ ಬಗ್ಗಿಸಿ ಪುಸ್ತಕ ಓದಲು ತೊಡಗಿದರೆ, ಅದು ನಮ್ಮನ್ನು ತಲೆ ಎತ್ತಿ ಬದುಕುವ ಹಾಗೆ ಮಾಡುತ್ತದೆ. ಈ ನಿಟ್ಟಿನಲ್ಲಿ ಯುವ ಜನರನ್ನು ಆರ್ಕಷಿಸಲು ಪುಸ್ತಕ ಹಬ್ಬಗಳು, ಮೇಳಗಳು, ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚು ಹೆಚ್ಚು ನಡೆಯುವ ಅಗತ್ಯವಿದೆ ಎಂದರು.

ಪರಿಸರ ಸಂಸ್ಥೆಯ ಅಧ್ಯಕ್ಷ ಮಂಗಲ ಯೋಗೇಶ್, ಕರವೇ(ವೀರ ಕನ್ನಡಿಗರ ಘರ್ಜನೆ) ಜಿಲ್ಲಾಧ್ಯಕ್ಷ ಎಂ.ಸಿ.ನವೀನ್, ಪರಿಚಯ ಪುಸ್ತಕ ಪ್ರಕಾಶನದ ಸಂಸ್ಥಾಪಕ ಎಂ.ಎನ್.ಶಿವಕುಮಾರ್ ಆರಾಧ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net