

- ಶ್ರವಣ್‌ಕುಮಾರ್ ನಾಳ ಪುತ್ತೂರು
ಪಶ್ಚಿಮ ಘಟ್ಟದ ರೆಡ್‌ಸ್ಟೋನ್ ವ್ಯಾಲಿ ಎಂದೇ ಪ್ರಸಿದ್ಧಿ ಪಡೆದ ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದ ಪುಷ್ಪಗಿರಿ ಅಭಯಾರಣ್ಯದ ಬೆಟ್ಟಗಳಲ್ಲಿ ಮತ್ತೆ ಬೆಳೆಬಾಳುವ ಕಲ್ಲಿಗಾಗಿ ಭೂ ಅಗೆತ ಆರಂಭಗೊಂಡಿದೆ.
ಎರಡು ದಶಕಗಳ ಹಿಂದೆ ಸುಬ್ರಹ್ಮಣ್ಯ ಮತ್ತು ಕೊಡಗಿಗೆ ಹೊಂದಿಕೊಂಡಿರುವ ಕೂಜಿಮಲೆ ಮತ್ತು ಸುಟ್ಟತ್ ಮಲೆ ಎಂಬ ಬೆಟ್ಟಗಳಲ್ಲಿ ಹೊಳೆಯುವ ಕೆಂಪು ಹರಳು ಕಲ್ಲು ಅಕ್ರಮ ಗಣಿಗಾರಿಕೆ ಆರಂಭಗೊಂಡಿತ್ತು. ಹಣದಾಸೆಗಾಗಿ ಸುರಂಗ, ಗುಂಡಿ ತೋಡುವ ಮಾಫಿಯಾಗಳಿದ್ದವು. ಸ್ಥಳೀಯರ ಸಹಿತ ದೂರದ ಊರುಗಳಿಂದಲೂ ಹರಳು ಅಗೆಯಲು ಬೆಟ್ಟು ಹತ್ತುವುದು ಆಗ ಸಾಮಾನ್ಯವಾಗಿದ್ದು, ಸರ್ಕಾರದ ಕಟ್ಟುನಿಟ್ಟಿನ ಕ್ರಮದ ಬಳಿಕ ಅಕ್ರಮ ದಂಧೆಗೆ ಕಡಿವಾಣ ಹಾಕಲಾಗಿತ್ತು.
ಕೂಜಿಮಲೆ, ಸುಟ್ಟತ್ ಮಲೆ ಪ್ರದೇಶದಲ್ಲಿ ಈಗ ಅಗೆತ ಪುನರಾರಂಭಗೊಂಡಿದ್ದು, ಹತ್ತಾರು ಕಾರ್ಮಿಕರು ಗಣಿಗಾರಿಕೆ ನಡೆಸುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿರುವ ರಾಜಸ್ಥಾನ, ಗುಜರಾತ್‌ನ ಕಾರ್ಮಿಕರ ಮೂಲಕ ದಂಧೆ ನಡೆಯುತ್ತಿದೆ. ಕೊಡಗು ಜಿಲ್ಲೆಯ ಯುವಕರೂ ಇದ್ದಾರೆ. ಬೆಟ್ಟದ ತುದಿಯಲ್ಲಿ ಅಲ್ಲಲ್ಲಿ ಭಾರಿ ಗಾತ್ರದ ಹೊಂಡಗಳು, ಸುರಂಗಗಳು ಇದ್ದು, ಇದರಲ್ಲಿ ಹರಳುಕಲ್ಲುಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಬೃಹತ್ ಹೊಂಡಗಳಿಂದ ಹರಳು ತೆಗೆಯಲು ವ್ಯವಸ್ಥಿತ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಅರಣ್ಯ ಇಲಾಖೆ ಮಾತ್ರ ಯಾವುದೂ ಗೊತ್ತೇ ಇಲ್ಲವೆಂಬಂತೆ ಪರೋಕ್ಷವಾಗಿ ದಂಧೆಗೆ ಸಹಕಾರ ನೀಡುತ್ತಿದೆ ಎಂಬ ಆರೋಪಗಳಿವೆ.
ಪ್ರಾಕೃತಿಕ ವಿಕೋಪ: ಪಶ್ಚಿಮಘಟ್ಟಗಳ ದಟ್ಟ ಅರಣ್ಯ, ಅಲ್ಲಿನ ಮೇಲ್ಮೈ ನಾಶವಾದರೆ ಉಳಿಗಾಲವಿಲ್ಲ ಎಂಬುದು ಹಲವು ಬಾರಿ ಸಾಬೀತಾಗಿದೆ. ಎರಡು ದಶಕಗಳ ಹಿಂದೆ ನಿರಂತರ ಹರಳು ಕಲ್ಲಿಗಾಗಿ ಬೆಟ್ಟ ಅಗೆದು ಪುಷ್ಪಗಿರಿ ಅಭಯಾರಣ್ಯ ನಲುಗಿ ಹೋಗಿದ್ದರ ಪರಿಣಾಮ ತಳಭಾಗದಲ್ಲಿರುವ ಸುಳ್ಯ ತಾಲೂಕಿನ ಗಡಿಗ್ರಾಮಗಳಾದ ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು, ಹರಿಹರ ಮುಂತಾದ ಪ್ರದೇಶಗಳು ಇತ್ತೀಚಿನ ವರ್ಷಗಳಲ್ಲಿ ಭೂಕುಸಿತ, ಪ್ರವಾಹದ ಸ್ಥಿತಿ ಎದುರಿಸುತ್ತಿವೆ. ಸುರಂಗಗಳ ಒಳಗೆ ನೀರು ಸಂಗ್ರಹಗೊಂಡು ಬೆಟ್ಟಗಳು ಕುಸಿಯುತ್ತಿವೆ ಎಂಬ ವಾದವೂ ಇದೆ.
ಬ್ರಿಟಿಷ್ ಸರ್ಕಾರದ ಹೆಸರು: 1850ರ ಸಂದರ್ಭ ಬ್ರಿಟಿಷ್ ಸರ್ಕಾರವು ಪುಷ್ಪಗಿರಿ ಅಭಯಾರಣ್ಯ ಭಾಗದ ಕೂಜಿಮಲೆ ಮತ್ತು ಸುಟ್ಟತ್ ಮಲೆ ವ್ಯಾಪ್ತಿಯ 3 ಬೆಟ್ಟಗಳನ್ನು ರೆಡ್‌ಸ್ಟೋನ್ ವ್ಯಾಲಿ ಎಂದು ಹೆಸರಿಟ್ಟು ಕರೆದಿತ್ತು. ಆಗ ಇಲ್ಲಿ ಹೇರಳವಾಗಿ ಸಿಗುತ್ತಿದ್ದ ರೆಡ್‌ಸ್ಟೋನ್‌ಗಳನ್ನು ನೆಲಹಾಸು ಹಾಗೂ ವಾಸ್ತಿ ಶಿಲ್ಪಗಳಲ್ಲಿ ಬಳಸಲಾಗುತ್ತಿತ್ತು.
ಸಾಕ್ಷೃ ನಾಶಪಡಿಸಿದ ಇಲಾಖೆ: ಅಕ್ರಮ ದಂಧೆ ಮಾಹಿತಿ ಪಡೆದ ‘ವಿಜಯವಾಣಿ’ ಪ್ರತಿನಿಧಿ ಬೆಟ್ಟಕ್ಕೆ ತೆರಳಿದ್ದು, ಅಪಾಯಕಾರಿ ಸುರಂಗ ಕೊರೆದು ಹೊಳೆಯುವ ಕಲ್ಲುಗಳಿಗಾಗಿ ಹುಡುಕಾಟ ನಡೆಸುವ ಸ್ಥಳ ಪತ್ತೆಯಾಗಿದೆ. ಇದರ ಫೋಟೋ, ವಿಡಿಯೋಗಳನ್ನೂ ತೆಗೆಯಲಾಗಿತ್ತು. ಆದರೆ ಇದರ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಚೆಕ್‌ಪೋಸ್ಟ್‌ನಲ್ಲಿ ಮೊಬೈಲ್ ಹಾಗೂ ಕ್ಯಾಮರಾ ಕಸಿದು, ಎಲ್ಲವನ್ನೂ ಡಿಲೀಟ್ ಮಾಡಿದ್ದಾರೆ.
ಕೆ.ಜಿ.ಗೆ 40 ಸಾವಿರ ರೂ.!: ದಶಕಗಳ ಹಿಂದೆ ಈ ಹರಳು ಕಲ್ಲು ಕೆ.ಜಿ.ಗೆ 500ರಿಂದ 1 ಸಾವಿರ ರೂಪಾಯಿ ಬೆಲೆ ದೊರೆಯುತ್ತಿತ್ತು. ಪ್ರಸ್ತುತ ರಾಜಸ್ಥಾನ, ಗುಜರಾತ್, ಮುಂಬಯಿ ಆಭರಣ ತಯಾರಿಕರಿಂದ ಭಾರಿ ಬೇಡಿಕೆ ಇದ್ದು, ಪ್ರತಿ ಕೆ.ಜಿ. ಹರಳು ಕಲ್ಲು 30ರಿಂದ 40 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಆಭರಣಗಳಿಗೆ ಮತ್ತು ಅಲಂಕಾರಿಕ ವಸ್ತುಗಳಿಗೆ ಈ ಹೊಳೆಯುವ ಕೆಂಪು ಕಲ್ಲುಗಳು ಬಳಕೆಯಾಗುತ್ತಿರುವುದರಿಂದ ಅಪಾರ ಬೇಡಿಕೆ ಇದೆ.
‘ಪುಷ್ಪ’ ಚಿತ್ರ ಹೋಲುವ ದಂಧೆ: ಭಾರಿ ಸದ್ದು ಮಾಡಿದ ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ದಟ್ಟಾರಣ್ಯದಲ್ಲಿ ನಡೆಯುವ ರಕ್ತಚಂದನ ಕರಾಳ ಮಾಫಿಯಾವನ್ನು ಕೇಂದ್ರೀಕರಿಸಿದ ಚಲನಚಿತ್ರ. ಇದೇ ಮಾದರಿಯಲ್ಲಿ ಪಶ್ಚಿಮಘಟ್ಟದಲ್ಲಿ ರೆಡ್‌ಸ್ಟೋನ್ ದಂಧೆ ಕಾರ್ಯನಿರ್ವಹಿಸುತ್ತಿದೆ. ಹಿಂದೆ ಹರಳುಕಲ್ಲು ದಂಧೆಯಿಂದಾಗಿ ಹೊಡೆದಾಟ, ಸುರಂಗ ಕುಸಿತ ಮತ್ತಿತರ ಕಾರಣಗಳಿಂದ ಅಲ್ಲಿ ಹಲವರು ಸಾವಿಗೀಡಾಗಿದ್ದರು.
ಪುಷ್ಪಗಿರಿ ಅಭಯಾರಣ್ಯ ಭಾಗದಲ್ಲಿ ಹರಳು ಕಲ್ಲು ದಂಧೆ ನಡೆಯುತ್ತಿರುವ ಬಗ್ಗೆ ಯಾವುದೇ ಮಾಹಿತಿ ಸರ್ಕಾರಕ್ಕೆ ಇಲ್ಲ. ಈ ಹಿಂದೆ ಇಂತಹ ದಂಧೆಗಳಿಗೆ ಅರಣ್ಯ ಇಲಾಖೆಯಿಂದಲೇ ಕಡಿವಾಣ ಹಾಕಲಾಗಿತ್ತು. ರೆಡ್‌ಸ್ಟೋನ್ ವ್ಯಾಲಿಯ ಕಾರ್ಯಚಟುವಟಿಕೆಯ ಮಾಹಿತಿ ಪಡೆದು ಹರಳು ದಂಧೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಉಮೇಶ್ ಕತ್ತಿ, ಅರಣ್ಯ ಸಚಿವ