ಕೊಡಗಿನಲ್ಲಿ ಪುಷ್ಯ ಮಳೆಯ ಅಬ್ಬರ

Pushya rain in Kodagu
Published on

ಮಡಿಕೇರಿ:

ಕೊಡಗಿನಲ್ಲಿ 2018ರ ದುರಂತ ನೆನಪಿಸುವ ರೀತಿಯಲ್ಲಿ ಮಳೆಯಾಗುತ್ತಿದೆ. ಕಾವೇರಿ ಮತ್ತು ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮಳೆಯ ಪರಿಸ್ಥಿತಿ ಇನ್ನೂ 2 ದಿನ ಹೀಗೆಯೇ ಮುಂದುವರಿಯಲಿದ್ದು, ಭಾರತೀಯ ಹವಾಮಾನ ಇಲಾಖೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಜಿಲ್ಲೆಯಲ್ಲಿ ಬುಧವಾರವೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕಾವೇರಿ ಸೇರಿದಂತೆ ಜಿಲ್ಲೆಯ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹಾರಂಗಿ ಅಣೆಕಟ್ಟೆಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು ಬಿಡಲಾಗುತ್ತಿದ್ದು ಕುಶಾಲನಗರದಲ್ಲಿ ಈಗಾಗಲೇ ಹಲವು ಬಡಾವಣೆಗಳಿಗೆ ನೀರು ನುಗ್ಗಿದೆ. ಸಾಯಿ ಬಡಾವಣೆಯಲ್ಲಿ ಮನೆಗಳಿಗೆ ನೀರು ಬರುತ್ತಿದ್ದು, ಸ್ಥಳೀಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಪ್ರವಾಹದ ನೀರಿನಲ್ಲಿ ಮುಳುಗಿದೆ. ಭಾಗಮಂಡಲ-ನಾಪೋಕ್ಲು ಮತ್ತು ಭಾಗಮಂಡಲ-ಮಡಿಕೇರಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಭಗಂಡೇಶ್ವರ ದೇವಾಲಯದ ಮೆಟ್ಟಿಲುಗಳ ತನಕ ನೀರು ಬಂದಿದೆ.

ವಿರಾಜಪೇಟೆ ಹೋಬಳಿ ಬೇತ್ರಿಯಲ್ಲಿ ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಇಲ್ಲಿ ಕಾವೇರಿ ನದಿಯ ಹಿನ್ನೀರಿನಲ್ಲಿ ಸಿಲುಕಿದ ಆರು ಜನರನ್ನು ಅಗ್ನಿಶಾಮಕ ದಳದ ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ.
ಬೆಟಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಂಬಾರಕೊಪ್ಪ ರಸ್ತೆ ಬದಿಯಲ್ಲಿ ಮಣ್ಣು ಕುಸಿದಿದ್ದು, ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಪೆರಾಜೆ ಗ್ರಾಮದ ಮಾಜಿಕೋಡಿ ಹೊಸಗದ್ದೆಯಲ್ಲಿ ಭೂಕುಸಿತ ಸಂಭವಿಸಿದೆ. ಕೆ.ಪೆರಾಜೆ-ಅಲೆಟ್ಟಿ ರಸ್ತೆಯಲ್ಲೂ ಭೂ ಕುಸಿತ ಆಗಿದೆ.

ಮಂಗಳವಾರ ಸಂಜೆಯ ಮಾಹಿತಿ ಪ್ರಕಾರ ಹಾರಂಗಿ ಅಣೆಕಟ್ಟೆಗೆ 12,960 ಟಿಎಂಸಿ ನೀರಿನ ಒಳಹರಿವು ಇತ್ತು. ನದಿಗೆ 27,500 ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು. 2,859 ಅಡಿ ಎತ್ತರದ ಅಣೆಕಟ್ಟೆಯಲ್ಲಿ 2857.03 ಅಡಿಗಳಷ್ಟು ನೀರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net